ಸ್ಮಶಾನದ ಬಳಿ ಗುತ್ತಿಗೆದಾರನಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ!

ಶಿವಮೊಗ್ಗ, ಅ. 13: ಸ್ಮಶಾನವೊಂದರ ಬಳಿ ಗುತ್ತಿಗೆದಾರರೋರ್ವರಿಂದ ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು, ಲಂಚದ ಹಣದ ಸಮೇತ ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಶಿವಮೊಗ್ಗ ತಾಲೂಕಿನ ಬುಕ್ಲಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಶಿವಮೊಗ್ಗ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಗೋಪಿನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ. ಲೋಕಾಯುಕ್ತ ಎಸ್ಪಿ ಎನ್. ವಾಸುದೇವರಾಮ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್, ಇನ್ಸ್’ಪೆಕ್ಟರ್ ಸುರೇಶ್, ಪ್ರಕಾಶ್ ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

ಲಂಚಕ್ಕೆ ಡಿಮ್ಯಾಂಡ್: ದೂರುದಾರ ಕಾಟಿಕೆರೆ ಗ್ರಾಮದ ಉಪ ಗುತ್ತಿಗೆದಾರ ಜಿ. ರವಿಕುಮಾರ್ ಎಂಬುವರು, ರಾಮಿನಕೊಪ್ಪ ಹಾಗೂ ಬುಕ್ಲಾಪುರ ಸ್ಮಶಾನ ಅಭಿವೃದ್ದಿ ಕಾಮಗಾರಿ ನಿರ್ವಹಿಸಿದ್ದರು. ಬುಕ್ಲಾಪುರ ಸ್ಮಶಾನ ಅಭಿವೃದ್ದಿ ಕಾಮಗಾರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 10 ಲಕ್ಷ ರೂ. ಮಂಜೂರಾಗಬೇಕಾಗಿತ್ತು.

ಈ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ, ರವಿಕುಮಾರ್ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಗೋಪಿನಾಥ್ ಅವರಿಗೆ ಮನವಿ ಮಾಡಿದ್ದರು. 15 ಸಾವಿರ ರೂ. ಲಂಚ ನೀಡುವಂತೆ ಎಸ್.ಗೋಪಿನಾಥ್ ಡಿಮ್ಯಾಂಡ್ ಮಾಡಿದ್ದರು. ಈ ಸಂಬಂಧ ರವಿಕುಮಾರ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಶುಕ್ರವಾರ ಬುಕ್ಲಾಪುರ ಸ್ಮಶಾನದ ಬಳಿ ಸ್ಥಳ ಪರಿಶೀಲನೆಗಾಗಿ ಅಧಿಕಾರಿ ಎಸ್.ಗೋಪಿನಾಥ್ ಆಗಮಿಸಿದ್ದು, ಈ ವೇಳೆ ಸದರಿ ಗುತ್ತಿಗೆದಾರನಿಂದ 15 ಸಾವಿರ ರೂ. ಪಡೆದಿದ್ದಾರೆ. ‘ಈ ವೇಳೆ ದಾಳಿ ನಡೆಸಿ ಲಂಚದ ಹಣದ ಸಮೇತ ಅಧಿಕಾರಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ‘ ಎಂದು ಲೋಕಾಯುಕ್ತ ಸಂಸ್ಥೆಯು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Previous post ಶಿವಮೊಗ್ಗ : ಪಾಳು ಬೀಳುತ್ತಿರುವ ಗಾಂಧಿ ಪಾರ್ಕ್ : ವ್ಯರ್ಥವಾದ ಕೋಟಿ ಕೋಟಿ ರೂ…!
ಶಿವಮೊಗ್ಗ, ಭದ್ರಾವತಿ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ ವಿಳಂಬಕ್ಕೆ ಡಿಸಿ ಅಸಮಾಧಾನ : ಕಾಲಮಿತಿಯೊಳಗೆ ಪೂರ್ಣಕ್ಕೆ ತಾಕೀತು! Next post ಶಿವಮೊಗ್ಗ, ಭದ್ರಾವತಿ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ ವಿಳಂಬಕ್ಕೆ ಡಿಸಿ ಅಸಮಾಧಾನ : ಕಾಲಮಿತಿಯೊಳಗೆ ಪೂರ್ಣಕ್ಕೆ ತಾಕೀತು!