
ಶಿವಮೊಗ್ಗ, ಭದ್ರಾವತಿ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ ವಿಳಂಬಕ್ಕೆ ಡಿಸಿ ಅಸಮಾಧಾನ : ಕಾಲಮಿತಿಯೊಳಗೆ ಪೂರ್ಣಕ್ಕೆ ತಾಕೀತು!
ಶಿವಮೊಗ್ಗ, ಅ. 13 : ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ರಾಷ್ಟ್ರೀಯ ಹೆದ್ದಾರಿ, ವರ್ತುಲ ರಸ್ತೆಗಳು, ಮೇಲ್ಸೇತುವೆ ನಿರ್ಮಾಣ, ರಸ್ತೆ ಅಗಲೀಕರಣ ಮುಂತಾದ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಅಡ್ಡಿಯಾಗಿರುವ ಭೂಸ್ವಾದೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕಾಮಗಾರಿಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಫಾರೆಸ್ಟ್ ಕ್ಲಿಯರೆನ್ಸ್, ಭೂಸ್ವಾದೀನ ಹಾಗೂ ಯುಟಿಲಿಟಿ ಶಿಫ್ಟಿಂಗ್‍ಗಳ ಕುರಿತು ಪರಿಶೀಲಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾಮಗಾರಿಗಳನ್ನು ಆರಂಭಿಸಲು ತೊಡಕು ಉಂಟಾಗಿರುವ ಸ್ಥಳಗಳಲ್ಲಿನ ನಿವಾಸಿಗಳು ಅಥವಾ ಭೂಮಾಲೀಕರ ಸಭೆ ಕರೆದು ವಾಸ್ತವ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡಬೇಕು. ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡ ನಂತರ ಭೂಮಾಲೀಕರಿಗೆ ಸರ್ಕಾರ ಈಗಾಗಲೇ ನಿಗಧಿಪಡಿಸಿದ ಪರಿಹಾರಧನವನ್ನು ನಿಯಮಾನುಸಾರ ನೀಡಿ, ಒಪ್ಪಿಗೆ ಪಡೆದು, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಆದೇಶಿಸಿದರು.
ಕಾಮಗಾರಿಗಳು ಅನುಮೋದನೆಗೊಂಡು ಅನೇಕ ತಿಂಗಳುಗಳು ಉರುಳಿದರೂ ಭೂಸ್ವಾದೀನ ಪ್ರಕ್ರಿಯೆ ಆರಂಭಿಸಲು ಸರ್ವೇ ಕಾರ್ಯ ಆಗದಿರುವ ತಾಳಗುಪ್ಪ-ಹೊಸೂರು ರೈಲ್ವೇ ಮೇಲ್ಸೇತುವೆ ಕಾಮಗಾರಿ, ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ-13ರ ರಸ್ತೆ ಅಗಲೀಕರಣ ಹಾಗೂ ಶಿಕಾರಿಪುರ ಹೊರವರ್ತುಲ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೂಡಲೇ ಸರ್ವೇಕಾರ್ಯ ಕೈಗೊಂಡು ನವೆಂಬರ್ 01ರೊಳಗಾಗಿ ಸರ್ವೇ ಕಾರ್ಯ ಪೂರ್ಣಗೊಳಿಸಿ, ವರದಿ ನೀಡುವಂತೆ ಹಾಗೂ ಈ ಸಂಬಂಧ ಜಿಲ್ಲೆಯ ಶಿವಮೊಗ್ಗ ಮತ್ತು ಸಾಗರ ಉಪವಿಭಾಗಾಧಿಕಾರಿಗಳು ಹಾಗೂ ಆಯಾ ತಾಲೂಕುಗಳ ತಹಶೀಲ್ದಾರರು ಸೂಕ್ತ ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಶಿವಮೊಗ್ಗ ನಗರದಲ್ಲಿ ಈಗಾಗಲೇ ಆರಂಭಿಸಲಾಗಿರುವ ವಿದ್ಯಾನಗರ–ಎಲ್.ಸಿ.46 ಮತ್ತು ಭದ್ರಾವತಿಯ ಕಡದಕಟ್ಟೆ ರೈಲ್ವೇ ಮೇಲ್ಸೇತುವೆ ಕಾಮಗಾರಿಗಳು ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಕಾಮಗಾರಿಗಳು ಪೂರ್ಣಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದರಿಂದಾಗಿ ಲಘು ಮತ್ತು ಭಾರೀ ವಾಹನಗಳ ಸಂಚಾರಕ್ಕೆ ತೀವ್ರ ತರಹದ ಅಡ್ಡಿಯಾಗುತ್ತಿದೆ.
ಭಾರೀ ಪ್ರಮಾಣದಲ್ಲಿ ಆಕಸ್ಮಿಕ ಅಪಘಾತಗಳು ಸಂಭವಿಸುತ್ತವೆ. ಇದರ ನಿಯಂತ್ರಣಕ್ಕೆ ಇರುವ ಪರಿಹಾರವೆಂದರೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು. ಆದ್ದರಿಂದ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿ ನವೆಂಬರ್ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು ಕಳಸವಳ್ಳಿಗೆ ಹೋಗಲು ಸೇತುವೆ ನಿರ್ಮಾಣ, ಸಾಗರ ಚತುಷ್ಪಥ ರಸ್ತೆ ಅಗಲೀಕರಣ, ತುಂಗಾನದಿ ಸೇತುವೆ ನಿರ್ಮಾಣ, ಬೆಕ್ಕೋಡಿ ಯೋಜನೆ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿ-766ಸಿ ಬೈಂದೂರು-ನಾಗೋಡಿ ಸೆಕ್ಷನ್ ಕಾಮಗಾರಿ ಸೇರಿದಂತೆ ಜಿಲ್ಲೆಯಲ್ಲಿ ಮಂಜೂರಾಗಿ ಅನುಷ್ಟಾನದಲ್ಲಿರುವ ಅನೇಕ ಮಹತ್ವದ ಯೋಜನೆಗಳ ಕುರಿತು ಅಧಿಕಾರಿಗಳಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.
ಸಭೆಯಲ್ಲಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ, ಉಪವಿಭಾಗಾಧಿಕಾರಿಗಳಾದ ಸತ್ಯನಾರಾಯಣ, ಪಲ್ಲವಿ ಸಾತೇನಹಳ್ಳಿ, ಪೀರ್‍ಪಾಶ ಸೇರಿದಂತೆ ರಾಷ್ಟೀಯ ಹೆದ್ದಾರಿ ವಿಭಾಗದ ಅಭಿಯಂತರರು, ಎಲ್ಲಾ ತಾಲೂಕುಗಳ ತಹಶೀಲ್ದಾರರು, ಕಂದಾಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.