ಬಡ ಕುಟುಂಬ ಮಕ್ಕಳಿಗೆ ಅನುಕೂಲವಾಗಿರುವ ಶಿಶುಪಾಲನಾ ಕೇಂದ್ರ ಮುಚ್ಚಲು ಸರ್ಕಾರದ ಆದೇಶ : ಪೋಷಕರ ಆಕ್ರೋಶ!

ಶಿವಮೊಗ್ಗ, ಅ. 14: ಕಟ್ಟಡ ಮತ್ತು ಇತರೆ ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಕಾರ್ಮಿಕ ಇಲಾಖೆಯಿಂದ ತೆರೆಯಲಾಗಿದ್ದ ಶಿಶುಪಾಲನಾ ಕೇಂದ್ರ ಮುಚ್ಚಲು ಸರ್ಕಾರ ಹೊರಡಿಸಿರುವ ಆದೇಶ ಖಂಡಿಸಿ, ಅ. 13 ರಂದು ಶಿವಮೊಗ್ಗ ನಗರದ ಡಿಸಿ ಕಚೇರಿ ಎದುರು ತಮ್ಮ ಮಕ್ಕಳೊಂದಿಗೆ ಪೋಷಕರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದ್ದಾರೆ.

ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಸದರಿ ಶಿಶುಪಾಲನಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸದರಿ ಕೇಂದ್ರದಲ್ಲಿ ಮಕ್ಕಳಿಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸಮಯದಲ್ಲಿ ಉಪಹಾರ ನೀಡಲಾಗುತ್ತದೆ. ಯೂನಿಫಾರಂ, ಪಠ್ಯ ಪುಸ್ತಕ ಸೇರಿದಂತೆ ಎಲ್ಲ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಂಪ್ಯೂಟರ್ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ನಮ್ಮಂತಹ ಬಡ ಕುಟುಂಬಗಳ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಪೋಷಕರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ನಡುವೆ ದಿಢೀರ್ ಆಗಿ ಶಿಶುಪಾಲನಾ ಕೇಂದ್ರ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಇದರಿಂದ ಬಡ ಕುಟುಂಬದ ಮಕ್ಕಳಿಗೆ ಅನ್ಯಾಯ ಮಾಡಿದಂತಾಗಿದೆ. ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬುವುದು ದಿಕ್ಕು ತೋಚದಂತಾಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಈ ಕಾರಣದಿಂದ ಬಡ ಕುಟುಂಬಗಳ ಮಕ್ಕಳಿಗೆ ಉಪಯುಕ್ತವಾಗಿರುವ ಶಿಶುಪಾಲನಾ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಸದರಿ ಕೇಂದ್ರ ಮುಂದುವರಿಸಿಕೊಂಡು ಹೋಗಲು ಕಾರ್ಮಿಕ ಇಲಾಖೆಗೆ ಅವಕಾಶ ನೀಡಬೇಕು ಎಂದು ಪೋಷಕರು ರಾಜ್ಯ ಸರ್ಕಾಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗ, ಭದ್ರಾವತಿ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ ವಿಳಂಬಕ್ಕೆ ಡಿಸಿ ಅಸಮಾಧಾನ : ಕಾಲಮಿತಿಯೊಳಗೆ ಪೂರ್ಣಕ್ಕೆ ತಾಕೀತು! Previous post ಶಿವಮೊಗ್ಗ, ಭದ್ರಾವತಿ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ ವಿಳಂಬಕ್ಕೆ ಡಿಸಿ ಅಸಮಾಧಾನ : ಕಾಲಮಿತಿಯೊಳಗೆ ಪೂರ್ಣಕ್ಕೆ ತಾಕೀತು!
Next post ಶಿವಮೊಗ್ಗ : ತುಂಗಾ ನಾಲೆಯಲ್ಲಿ ಅನಾಮಧೇಯ ಪುರುಷನ ಶವ ಪತ್ತೆ!