ಸರ್ವರ್ ಡೌನ್ : ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡಿಗೆ ಮುಂದುವರಿದ ಪರದಾಟ – ಗಮನಹರಿಸುವರೆ ಆಹಾರ ಸಚಿವರು?

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಅ. 18: ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಪಡಿತರ ಚೀಟಿ (ರೇಷನ್ ಕಾರ್ಡ್) ತಿದ್ದುಪಡಿಗೆ, ರಾಜ್ಯ ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಆದರೆ ‘ಸರ್ವರ್ ಡೌನ್’ ಸಮಸ್ಯೆಯಿಂದ ನಾಗರೀಕರು ಪರದಾಡುವಂತಾಗಿದೆ. ನಾಗರೀಕ ಸೇವಾ ಕೇಂದ್ರಗಳಲ್ಲಿ ದಿನಗಟ್ಟೆಲೆ ಬೀಡುವಂತಾಗಿದೆ!

ಸರಿಸುಮಾರು ಒಂದು ವರ್ಷದ ನಂತರ, ಬಿಪಿಎಲ್ ಪಡಿತರ ಚೀಟಿಯಲ್ಲಿ ಹೊಸದಾಗಿ ಕುಟುಂಬ ಸದಸ್ಯರ ಸೇರ್ಪಡೆ ಹಾಗೂ ಮಾಹಿತಿ ತಿದ್ದುಪಡಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿತ್ತು. ಆದರೆ ಸರ್ವರ್ ಡೌನ್ ಸಮಸ್ಯೆಯಿಂದ ಸಾಕಷ್ಟು ಸಂಖ್ಯೆಯ ನಾಗರೀಕರಿಗೆ ಪಡಿತರ ಚೀಟಿ ತಿದ್ದುಪಡಿ ಮಾಡಲು ಸಾಧ್ಯವಾಗಿರಲಿಲ್ಲ.

ನಾಗರೀಕರ ಒತ್ತಾಯದ ಮೇರೆಗೆ, ಇತ್ತೀಚೆಗೆ ರಾಜ್ಯ ಸರ್ಕಾರವು ಮತ್ತೇ ಮೂರು ದಿನಗಳ ಕಾಲಾವಾಕಾಶ ವಿಸ್ತರಣೆ ಮಾಡಿತ್ತು. ಈ ಬಾರಿ ನಾಗರೀಕ ಒನ್ ಕೇಂದ್ರಗಳಲ್ಲಿ ಮಾತ್ರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಸೈಬರ್ ಒನ್ ಕೇಂದ್ರಗಳಿಗೆ ನೀಡಿದ್ದ ಅವಕಾಶ ಹಿಂದೆಗೆದು ಕೊಂಡಿತ್ತು. ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ನೀಡಿದ್ದ ಮೂರು ದಿನಗಳ ಕಾಲಾವಕಾಶ ಅ. 18 ಕ್ಕೆ ಕೊನೆಗೊಳ್ಳುತ್ತಿದೆ.

ಆದರೆ ಆಹಾರ ಇಲಾಖೆಯ ವೆಬ್ ಸೈಟ್ ನಲ್ಲಿ ಸರ್ವರ್ ಡೌನ್ ಸಮಸ್ಯೆ ಎದುರಾಗಿತ್ತು. ನಿಗದಿತ ಪುಟ ತೆರೆದುಕೊಳ್ಳುತ್ತಿರಲಿಲ್ಲ. ಸೈಟ್ ಓಪನ್ ಆದರೂ ಒಂದು ಅರ್ಜಿ ಅಪ್ಲೋಡ್ ಮಾಡಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದ ಕೆಲ ನಾಗರೀಕರು ತಮ್ಮ ಕೆಲಸಕಾರ್ಯ ಬಿಟ್ಟು ನಾಗರೀಕ ಸೇವಾ ಕೇಂದ್ರಗಳ ಮುಂಭಾಗ ಗಂಟೆಗಟ್ಟಲೆ ಬೀಡುಬಿಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ದಿನವಿಡಿ ಕಾದು ಕುಳಿತುಕೊಳ್ಳುವಂತಾಗಿತ್ತು.

ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ನೀಡಿದ್ದ ಅವಕಾಶ ಅ. 18 ಕ್ಕೆ ಕೊನೆಗೊಳ್ಳುತ್ತಿದೆ. ಸರ್ವರ್ ಡೌನ್ ಸಮಸ್ಯೆಯಿಂದ ಸಾಕಷ್ಟು ಸಂಖ್ಯೆಯ ನಾಗರೀಕರು ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲವಾಗಿದೆ ಎಂಬ ಮಾಹಿತಿಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ.

ಗಮನಹರಿಸುವರೆ ಸಚಿವರು: ಸರ್ವರ್ ಡೌನ್ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು. ಸುಲಲಿತವಾಗಿ ಪಡಿತರ ಚೀಟಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ತಿದ್ದುಪಡಿಗೆ ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೆಲ ನಾಗರೀಕರು ಆಹಾರ ಸಚಿವರಿಗೆ ಒತ್ತಾಯಿಸುತ್ತಾರೆ.

ಒಂದೂವರೆ ವರ್ಷದ ನಂತರ ಲಭ್ಯವಾದ ಅವಕಾಶ!

**** ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ನಂತರ, ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ವಿತರಣೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಆದರೆ ಸರ್ಕಾರವು ಬಿಪಿಎಲ್ ಪಡಿತರ ಚೀಟಿಯ ತಿದ್ದುಪಡಿಗೆ ಮಾತ್ರ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಂಡಿತ್ತು. ಜೊತೆಗೆ ಹಾಲಿ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗೂ ಅನುಮತಿ ನೀಡಿತ್ತು. ಸರಿಸುಮಾರು ಒಂದೂವರೆ ವರ್ಷದ ನಂತರ ಲಭ್ಯವಾದ ಅವಕಾಶ ಸದ್ಭಳಕೆಗೆ ಸಾಕಷ್ಟು ಸಂಖ್ಯೆಯ ನಾಗರೀಕರು ಮುಂದಾಗಿದ್ದರು. ಆದರೆ ಸರ್ವರ್ ಡೌನ್ ಸಮಸ್ಯೆಯಿಂದ ಪಡಿತರ ಚೀಟಿ ತಿದ್ದುಪಡಿ ಮಾಡಲು ಸಾಧ್ಯವಾಗದೆ ನಾಗರೀಕರು ಪರಿತಪಿಸುತ್ತಿದ್ದಾರೆ. ಇನ್ನಿಲ್ಲದ ಸಂಕಷ್ಟ ಪಡುತ್ತಿದ್ದಾರೆ!

Previous post ‘ಕ್ರೀಡಾಪಟುಗಳಿಗೆ ಎಲ್ಲಾ ಇಲಾಖೆಗಳ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ’ : ಸಿಎಂ ಭರವಸೆ
Next post ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ