ಶಿವಮೊಗ್ಗ ದಸರಾ : ಗಜ ಪಡೆಗಳ ಕೊನೆ ಹಂತದ ತಾಲೀಮು!

ಶಿವಮೊಗ್ಗ, ಅ. 23: ನಾಡಹಬ್ಬ ದಸರಾದ ವಿಜಯದಶಮಿ ಮೆರವಣಿಗೆಯಲ್ಲಿ ಭಾಗಿಯಾಗಲಿರುವ, ಸಕ್ರೆಬೈಲು ಆನೆ ಬಿಡಾರದ ಮೂರು ಗಜ ಪಡೆಗಳ ತಾಲೀಮು ಕಾರ್ಯ ಸೋಮವಾರ ಕೂಡ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.

ಮಂಗಳವಾರ ನಡೆಯಲಿರುವ ವಿಜಯದಶಮಿ ಮೆರವಣಿಗೆಯಲ್ಲಿ ಅಂಬಾರಿ ಹೊರಲಿರುವ ಸಾಗರ ಆನೆ ಮತ್ತು ಈತನಿಗೆ ಸಾಥ್ ನೀಡಲಿರುವ ನೇತ್ರಾವತಿ ಹಾಗೂ ಹೇಮಾವತಿ ಆನೆಗಳನ್ನು ವಿಜಯದಶಮಿ ಮೆರವಣಿಗೆ ಸಾಗಲಿರುವ ಮಾರ್ಗಗಳಲ್ಲಿ ಸೋಮವಾರ ಸಂಜೆ ಕರೆದೊಯ್ಯಲಾಯಿತು.

ಅತ್ಯಂತ ಆರಾಮದಾಯಕವಾಗಿ ಆನೆಗಳು ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸರು ಹಾಗೂ ಸಕ್ರೆಬೈಲು ಆನೆ ಬಿಡಾರದ ಮಾವುತರು, ಕಾವಾಡಿಗಳು ಉಪಸ್ಥಿತರಿದ್ದರು.

ಈ ಬಾರಿಯು ಕೂಡ ಸುಮಾರು 39 ವರ್ಷ ಪ್ರಾಯದ ಸಾಗರ್ ಆನೆ ಅಂಬಾರಿ ಹೊರಲಿದ್ದಾನೆ. ಈತನಿಗೆ 25 ವರ್ಷದ ನೇತ್ರಾವತಿ ಹಾಗೂ 9 ವರ್ಷದ ಹೇಮಾವತಿ ಆನೆಗಳು ಜೊತೆಯಾಗಲಿದ್ದಾರೆ.

ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಮೆರವಣಿಗೆ ಆರಂಭವಾಗಲಿದೆ. ರಾಮಣ್ಣಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪನಾಯಕ ಸರ್ಕಲ್, ಅಮೀರ್ ಅಹಮ್ಮದ್ ಸರ್ಕಲ್, ಗೋಪಿ ಸರ್ಕಲ್, ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ಸರ್ಕಲ್, ಜೈಲ್ ರಸ್ತೆ, ಲಕ್ಷ್ಮೀ ಚಿತ್ರಮಂದರಿ ಸರ್ಕಲ್ ಮೂಲಕ ಸಮಾರಂಭ ನಡೆಯುವ ಸ್ಥಳವಾದ ಫ್ರೀಡಂ ಪಾರ್ಕ್ ಗೆ ಮೆರವಣಿಗೆ ಆಗಮಿಸಲಿದೆ. ಬನ್ನಿ ಮುಡಿಯುವ ಕಾರ್ಯದ ನಂತರ ನವರಾತ್ರಿಯ ಸಂಭ್ರಮಕ್ಕೆ ಅಂತಿಮ ತೆರೆ ಬೀಳಲಿದೆ.

Previous post ಜೆಡಿಎಸ್ ಸರ್ಕಾರ ಉರುಳಿದ್ದಕ್ಕೆ ಬೇರೆಯವರ ಮೇಲೆ ಆರೋಪ ನಿರರ್ಥಕ : ಮುಖ್ಯಮಂತ್ರಿ ಸಿದ್ದರಾಮಯ್ಯ
Next post ಗರ್ಭೀಣಿ ಆನೆ ಪ್ರಕರಣ : ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ – ಸಚಿವರಿಗೆ ದೂರು!