ಗರ್ಭೀಣಿ ಆನೆ ಪ್ರಕರಣ : ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ – ಸಚಿವರಿಗೆ ದೂರು!

ಶಿವಮೊಗ್ಗ, ಅ. 24: ದಸರಾ ವಿಜಯ ದಶಮಿ ಮೆರವಣಿಗೆಗೆ ಸಕ್ರೆಬೈಲು ಆನೆ ಬಿಡಾರದಿಂದ ಕಳೆದ ಕೆಲ ದಿನಗಳ ಹಿಂದೆ ಕರೆ ತಂದಿದ್ದ ನೇತ್ರಾವತಿ ಆನೆ ಸೋಮವಾರ ರಾತ್ರಿ ಮರಿ ಹಾಕಿದ್ದು, ಮಂಗಳವಾರ ಬೆಳಿಗ್ಗೆಯೇ ಆನೆ ಹಾಗೂ ಮರಿಯನ್ನು ಶಿವಮೊಗ್ಗ ನಗರದಿಂದ ಮತ್ತೇ ಬಿಡಾರಕ್ಕೆ ಕರೆದೊಯ್ಯಲಾಗಿದೆ.

ಈ ನಡುವೆ, ತುಂಬು ಗರ್ಭೀಣಿ ಆನೆಯನ್ನು ವಿಜಯ ದಶಮಿ ಮೆರವಣಿಗೆಗೆ ಕರೆತಂದ ಅರಣ್ಯ ಇಲಾಖೆ ವಿರುದ್ದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತಂತೆ ಸಕ್ರೆಬೈಲ್ ನ ವನ್ಯಜೀವಿ ವೈದ್ಯರಿಗೆ ಕನಿಷ್ಠ ಮಾಹಿತಿಯೂ ಇರಲಿಲ್ಲವೇಕೆ? ಸದರಿ ಪ್ರಕರಣದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ಅನುಸರಿಸಿದೆ ಎಂದು ನಾಗರೀಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಆಗ್ರಹ: ಗರ್ಭೀಣಿ ಆನೆಯನ್ನು ವಿಜಯದಶಮಿ ಮೆರವಣಿಗೆಗೆ ಕರೆತಂದು ಪೂರ್ವಭಾವಿ ತಾಲೀಮು ಕಾರ್ಯಕ್ಕೆ ಬಳಕೆ ಮಾಡಿದ್ದಕ್ಕೆ ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ತೋರಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಅರಣ್ಯ ಖಾತೆ ಸಚಿವರಿಗೆ ಆಗ್ರಹಿಸಿದ್ದಾರೆ.

ಮಂಗಳವಾರ ಈ ಕುರಿತಂತೆ ಪ್ರಕಟಣೆ ನೀಡಿರುವ ಅವರು, ‘ತುಂಬು ಗರ್ಭೀಣಿ ಆನೆಯನ್ನು ಮೆರವಣಿಗೆಗೆ ಕಳುಹಿಸಿದ ಅರಣ‍್ಯ ಇಲಾಖೆ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿ ಹಾಗೂ ನಿರ್ದಯವಾಗಿ ನಡೆದುಕೊಂಡಿದ್ದಾರೆ. ಆನೆ ರಾತ್ರಿಯೇ ಮರಿ ಹಾಕಿದ್ದರಿಂದ ಸಂಭಾವ್ಯ ಜೀವ ಅನಾಹುತವೊಂದು ತಪ್ಪಿದಂತಾಗಿದೆ.

ಗರ್ಭೀಣಿ ಆನೆಯನ್ನು ಮೆರವಣಿಗೆಗೆ ಕಳುಹಿಸಿದ ಅರಣ್ಯ ಇಲಾಖೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು. ದೂರು ದಾಖಲಿಸಿ ಬಂಧಿಸಬೇಕು. ಮೆರವಣಿಗೆಗೆ ಆನೆಗಳ ಬಳಕೆ ನಿಷೇಧಿಸಬೇಕು’ ಎಂದು ಅರಣ‍್ಯ ಇಲಾಖೆ ಸಚಿವರಿಗೆ ಆಗ್ರಹಿಸಿದ್ದಾರೆ.

ಆನೆ ಅಂಬಾರಿ ರದ್ದು: ಈ ಮೊದಲು ನಿರ್ಧರಿಸಿದ್ದಂತೆ, ವಿಜಯ ದಶಮಿ ಮೆರವಣಿಗೆಯಲ್ಲಿ ಸಾಗರ್ ಆನೆ ಅಂಬಾರಿ ಹೊರಬೇಕಾಗಿತ್ತು. ನೇತ್ರಾವತಿ ಹಾಗೂ ಹೇಮಾವತಿ ಆನೆಗಳು ಸಾಗರ್ ಆನೆ ಇಕ್ಕೆಲದಲ್ಲಿ ಸಾಗಬೇಕಾಗಿತ್ತು. ಆದರೆ ನೇತ್ರಾವತಿ ಆನೆ ಮರಿ ಹಾಕಿದ್ದರಿಂದ ಸಾಗರ್ ಆನೆ ಮೇಲೆ ಅಂಬಾರಿ ಹೊರಸದಿರುವ ನಿರ್ಧಾರ ಕೈಗೊಳ್ಳಲಾಗಿದೆ.

ಅಲಂಕೃತ ವಾಹನದ ಮೇಲೆ ಚಾಮುಂಡೇಶ್ವರಿ ದೇವಿಯ ವಿಗ್ರಹ ಕೊಂಡೊಯ್ಯುವ ಹಾಗೂ ಸಾಗರ್ ಮತ್ತು ಹೇಮಾವತಿ ಆನೆಯನ್ನು ಮೆರವಣಿಗೆಯಲ್ಲಿ ಕರೆತರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಬಿಡಾರದಿಂದ ಬಂದಿದ್ದ ಮೂರು ಆನೆಗಳು

ಶಿವಮೊಗ್ಗ ದಸರಾ ವಿಜಯ ದಶಮಿ ಮೆರವಣಿಗೆಗಾಗಿ, ಮೂರು ಆನೆಗಳನ್ನು ಸಕ್ರೆಬೈಲು ಆನೆ ಬಿಡಾರದಿಂದ ಕರೆತರಲಾಗಿತ್ತು. ಇದರಲ್ಲಿ ಸಾಗರ್ ಆನೆ ಅಂಬಾರಿ ಹೊರಬೇಕಾಗಿತ್ತು. ನೇತ್ರಾವತಿ ಹಾಗೂ ಹೇಮಾವತಿ ಆನೆಗಳು ಇದಕ್ಕೆ ಸಾಥ್ ನೀಡಬೇಕಾಗಿತ್ತು. ಇದಕ್ಕಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಆನೆಗಳನ್ನು ಓಡಾಡಿಸಿ ತಾಲೀಮು ನಡೆಸಲಾಗಿತ್ತು. ಇದೀಗ ನೇತ್ರಾವತಿ ಆನೆ ಮರಿ ಹಾಕಿರುವುದರಿಂದ ಜಂಬೂ ಸವಾರಿಯ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗುವಂತಾಗಿದೆ. 

Previous post ಶಿವಮೊಗ್ಗ ದಸರಾ : ಗಜ ಪಡೆಗಳ ಕೊನೆ ಹಂತದ ತಾಲೀಮು!
Next post ‘ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ಖಳನಾಯಕ’ : ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ!