ಶಿವಮೊಗ್ಗ, ಮೈಸೂರು, ತುಮಕೂರು ಪಾಲಿಕೆಗಳಿಗೆ ನಿಗದಿತ ಅವಧಿಯಲ್ಲಿ ನಡೆಯಲಿದೆಯೇ ಚುನಾವಣೆ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಅ. 26: ಶಿವಮೊಗ್ಗ, ಮೈಸೂರು ಹಾಗೂ ತುಮಕೂರು ಮಹಾನಗರ ಪಾಲಿಕೆಗಳ ಹಾಲಿ ಕಾರ್ಪೋರೇಟರ್ ಗಳ ಅಧಿಕಾರಾವಧಿ ನವೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆದರೆ ಇಲ್ಲಿಯವರೆಗೂ ಚುನಾವಣಾ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಿಲ್ಲ. ಇದರಿಂದ ಮೂರು ಪಾಲಿಕೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯಲಿದೆಯೇ? ಎಂಬ ಅನುಮಾನ ವ್ಯಕ್ತವಾಗುವಂತಾಗಿದೆ.
ಈ ಮೂರು ಪಾಲಿಕೆಗಳಿಗೆ 2018 ರ ಆಗಸ್ಟ್ 31 ರಂದು ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 3 ರಂದು ಮತಗಳ ಎಣಿಕೆಯಾಗಿತ್ತು. ನವೆಂಬರ್ ತಿಂಗಳಲ್ಲಿ ಮೇಯರ್ – ಉಪ ಮೇಯರ್ ಗಳ ಆಯ್ಕೆಯಾಗಿತ್ತು. ಮೊದಲ ಸಾಮಾನ್ಯ ಸಭೆಯಿಂದ ಹಾಲಿ ಸದಸ್ಯರ ಅಧಿಕಾರಾವಧಿ ಆರಂಭಗೊಂಡಿತ್ತು.
ನಿಯಮಾನುಸಾರ ನವೆಂಬರ್ ಮಧ್ಯಂತರದಿಂದ ಹಾಲಿ ಸದಸ್ಯರ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ಆದರೆ ಇಲ್ಲಿಯವರೆಗೂ ರಾಜ್ಯ ಸರ್ಕಾರ ಚುನಾವಣಾ ಪೂರ್ವಭಾವಿ ಸಿದ್ದತೆಗಳನ್ನು ಆರಂಭಿಸಿಲ್ಲ. ಇದರಿಂದ ನಿಗದಿತ ಅವಧಿಯಲ್ಲಿ ಈ ಮೂರು ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆಯೇ? ಇಲ್ಲವೇ? ಎಂಬ ಅನುಮಾನಗಳು ಮೂಡುವಂತಾಗಿದೆ.
ವಾರ್ಡ್ ವಾರು ಮೀಸಲಾತಿ ಪಟ್ಟಿ ಪ್ರಕಟವಾಗಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಾಗಬೇಕು. ಅಗತ್ಯವಿದ್ದರೆ ವಾರ್ಡ್ ಗಳ ಸಂಖ್ಯೆ ಹೆಚ್ಚಳ ಮಾಡಬೇಕು. ಸಿಬ್ಬಂದಿಗಳ ನಿಯೋಜನೆ ಸೇರಿದಂತೆ ಚುನಾವಣೆಗೆ ಪೂರ್ವಭಾವಿ ಸಿದ್ದತಾ ಕಾರ್ಯಗಳು ಈ ವೇಳೆಗಾಗಲೇ ಚಾಲನೆಗೊಳ್ಳಬೇಕಾಗಿತ್ತು.
ಆದರೆ ಈ ಮೂರು ಪಾಲಿಕೆಗಳಿಗೆ ಸಂಬಂಧಿಸಿದಂತೆ, ಯಾವುದೇ ಚುನಾವಣಾ ಪ್ರಕ್ರಿಯೆಗಳು ಇಲ್ಲಿಯವರೆಗೂ ಆರಂಭಗೊಂಡಿಲ್ಲವೆಂಬ ಮಾಹಿತಿಗಳು ಕೇಳಿಬರಲಾರಂಭಿಸಿದೆ. ಇದರಿಂದ ನಿಗದಿತ ಅವಧಿಯೊಳಗೆ ಚುನಾವಣೆ ನಡೆಯುವ ಸಾಧ್ಯತೆಗಳು ಗೋಚರವಾಗುತ್ತಿಲ್ಲವಾಗಿದೆ.
ಸಾಧ್ಯತೆಗಳೇನು?: ಮುಂಬರುವ ಲೋಕಸಭೆ ಚುನಾವಣೆ ಕಾರಣದಿಂದ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿವೆ.
ಈಗಾಗಲೇ ನಾನಾ ಆಡಳಿತಾತ್ಮಕ ಮತ್ತೀತರ ಕಾರಣದಿಂದ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳಿಗೆ ಇಲ್ಲಿಯವರೆಗೂ ಚುನಾವಣೆ ನಡೆದಿಲ್ಲ. ಇದೇ ರೀತಿಯಲ್ಲಿ ಅಧಿಕಾರಾವಧಿ ಪೂರೈಸುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ಸ್ಥಿತಿಯೂ ಆಗಲಿದೆಯೇ? ನಿಗದಿತ ಅವಧಿಯೊಳಗೆ ಚುನಾವಣೆಗಳು ನಡೆಯಲಿವೆಯೇ? ಎಂಬುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.