
ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಗೌರವ
ಶಿವಮೊಗ್ಗ, ಫೆ. 9: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಪ್ರಕಟವಾಗಿವೆ. ಶಿವಮೊಗ್ಗದ ಹಲವು ಪತ್ರಕರ್ತರು, ಅಕಾಡೆಮಿಯ ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.
ವಾರ್ಷಿಕ ಪ್ರಶಸ್ತಿ ಗೌರವ ವಿಭಾಗದಲ್ಲಿ ‘ವಾಯ್ಸ್ ಆಫ್ ಶಿವಮೊಗ್ಗ’ ಪತ್ರಿಕೆಯ ಭಂಡಿಗಡಿ ನಂಜುಂಡಪ್ಪ, ‘ಸಂಯುಕ್ತ ಕರ್ನಾಟಕ’ದ ಕೆ.ಹುಲಿಮನೆ ತಿಮ್ಮಪ್ಪ, ‘ಪ್ರಜಾವಾಣಿ’ಯ ಜಿ.ಹೆಚ್.ವೆಂಕಟೇಶ್, ‘ವಿಜಯವಾಣಿ’ಯ ಶಾಂತಕುಮಾರ್ ಮತ್ತು ಅರವಿಂದ್ ಅಕ್ಲಾಪುರ,
‘ಕನ್ನಡ ಮೀಡಿಯಂ’ನ ಹೊನ್ನಾಳ್ಳಿ ಚಂದ್ರಶೇಖರ್ ಹಾಗೂ ‘ಕ್ರಾಂತಿದೀಪ’ದ ನಾಗರಾಜ್ ನೇರಿಗೆ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ದತ್ತಿ ಪ್ರಶಸ್ತಿ ವಿಭಾಗದಲ್ಲಿ ಸಾಗರದ ‘ವಿಜಯವಾಣಿ’ ಪತ್ರಿಕೆಯ ದೀಪಕ್ ಸಾಗರ್ ಅವರು ಅತ್ಯುತ್ತಮ ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ‘ಮೈಸೂರು ದಿಗಂತ ಪ್ರಶಸ್ತಿ’ ಲಭಿಸಿದೆ. ಶಿವಮೊಗ್ಗ ನಗರದ ‘ನಾವಿಕ’ ದಿನಪತ್ರಿಕೆಗೆ, ಅತ್ಯುತ್ತಮ ಜಿಲ್ಲಾ ಪತ್ರಿಕೆ ವಿಭಾಗದಲ್ಲಿ ಕೊಡಮಾಡುವ ಪ್ರತಿಷ್ಠಿತ ‘ಆಂದೋಲನ ಪ್ರಶಸ್ತಿ’ಗೆ ಭಾಜನವಾಗಿದೆ.
ಉಳಿದಂತೆ ಈ ಹಿಂದೆ ಶಿವಮೊಗ್ಗದಲ್ಲಿದ್ದ, ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಪ್ರಜಾವಾಣಿ’ಯ ಚಂದ್ರಹಾಸ ಹಿರೇಮಳಲಿ ಅವರೂ ಕೂಡ ವಾರ್ಷಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಜಿಲ್ಲೆಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರು ಅಭಿನಂದಿಸಿ ಶುಭ ಹಾರೈಸಿದ್ದಾರೆ.