ಶಿವಮೊಗ್ಗ, ಮೈಸೂರು, ತುಮಕೂರು ಪಾಲಿಕೆಗಳಿಗೆ ನಿಗದಿತ ಅವಧಿಯೊಳಗೆ ಚುನಾವಣೆ : ನಗರಾಭಿವೃದ್ಧಿ ಸಚಿವರ ಸ್ಪಷ್ಟನೆ

ಶಿವಮೊಗ್ಗ, ಅ. 27: ಶಿವಮೊಗ್ಗ, ಮೈಸೂರು, ತುಮಕೂರು ಮಹಾನಗರ ಪಾಲಿಕೆಗಳಿಗೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚುನಾವಣೆಗೆ ಅಗತ್ಯ ಪೂರ್ವಭಾವಿ ಸಿದ್ದತೆಗಳ ಮಾಡಿಕೊಳ್ಳುವ ಕುರಿತಂತೆ, ಆಯಾ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ 6 ತಿಂಗಳೊಳಗೆ

ಹೊಸದಾಗಿ ಸಿಡಿಪಿ ಪ್ಲ್ಯಾನ್ ಸಿದ್ದಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವೇಳೆ ಯಾವ್ಯಾವ ಪ್ರದೇಶಗಳನ್ನು ನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದನ್ನು ಕೂಡ ಜನರ ಅಭಿಪ್ರಾಯ ಪಡೆದು ನಿರ್ಧರಿಸಿ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ ಅಕ್ರಮದ ಕುರಿತಂತೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ದ ಕ್ರಮ ಜರುಗುಸಲಾಗುವುದು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಹೇಳಿದ್ದಾರೆ. ಅದರಂತೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಲೇಔಟ್ ಗಳನ್ನು ಅಭಿವೃದ್ಧಿಪಡಿಸಿ ನಾಗರೀಕರಿಗೆ ರಿಯಾಯಿತಿ ದರದಲ್ಲಿ ನಿವೇಶನ ವಿತರಣೆಗೆ ಕ್ರಮಕೈಗೊಳ್ಳುವಂತೆ ಹಾಗೂ ಅಲ್ಲಿಯವರೆಗೆ ಖಾಸಗಿ ಲೇಔಟ್ ಗಳಿಗೆ ಅನುಮತಿ ನೀಡಿದಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

‘ಕಲುಷಿತ ಕುಡಿಯುವ ನೀರು ಪೂರೈಕೆಯಾದರೆ ಹಿರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ’

*** ಕುಡಿಯುವ ನೀರಿನ ಜೊತೆ ಕಲುಷಿತ ನೀರು ಪೂರೈಕೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶಿವಮೊಗ್ಗ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿನೊಂದಿಗೆ ಏನಾದರು ಕೊಳಚೆ ನೀರು ಪೂರೈಕೆಯಾದರೆ, ಕಲುಷಿತ ನೀರು ಸೇವಿಸಿ ನಾಗರೀಕರು ಅಸ್ವಸ್ಥಗೊಂಡರೆ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನೇ ಹೊಣೆಯಾಗಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಓವರ್ ಹೆಡ್ ಟ್ಯಾಂಕ್ ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಕುಡಿಯುವ ನೀರು ಪೂರೈಕೆಯ ಪೈಪ್ ಲೈನ್ ಗಳನ್ನು ದುರಸ್ತಿಗೊಳಿಸಬೇಕು ಎಂದು ಸೂಚಿಸಿದ್ದಾರೆ.

ತೆರಿಗೆ ಸಂಗ್ರಹ : ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತೆರಿಗೆ ಸಂಗ್ರಹಣೆಗೆ ಕ್ರಮಕೈಗೊಳ್ಳಬೇಕು. ಸಮರ್ಪಕವಾಗಿ ತೆರಿಗೆ ಸಂಗ್ರಹಿಸದ ಮುಖ್ಯಾಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ, ಶಾಸಕ ಚನ್ನಬಸಪ್ಪ, ಡಿಸಿ ಆರ್.ಸೆಲ್ವಮಣಿ, ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಮೊದಲಾದವರಿದ್ದರು.

ಹೊಸಮನೆ ಬಡಾವಣೆಯಲ್ಲಿ ರಾಜಕಾಲುವೆ ಉದ್ಘಾಟನೆ

*** ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ನಿರ್ಮಾಣ ಮಾಡಲಾಗಿರುವ ರಾಜಕಾಲುವೆಯನ್ನು ಸಚಿವ ಭೈರತಿ ಸುರೇಶ್ ಅವರು ಶುಕ್ರವಾರ ಬೆಳಿಗ್ಗೆ ಉದ್ಘಾಟಿಸಿದರು. ನಾಗರೀಕರ ಬಹು ವರ್ಷಗಳ ಬೇಡಿಕೆಯಾಗಿದ್ದ ರಾಜಕಾಲುವೆ ನಿರ್ಮಾಣದ ಕಾಮಗಾರಿಯು ಮಹಾನಗರ ಪಾಲಿಕೆಯ 2022- 23ರ ಎಸ್ .ಎಫ್. ಸಿ. ಯ 1 ಕೋಟಿ ರೂ. ವೆಚ್ಚದ ರಾಜಕಾಲುವೆ ಕಾಮಗಾರಿ ಕೈಗೊಳ್ಳಲಾಗಿತ್ತು.

ಹೊಸಮನೆ ಬಡಾವಣೆಯಲ್ಲಿ ರಾಜಕಾಲುವೆ ಉದ್ಘಾಟನೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಯುವ ಮುಖಂಡರಾದ ಕೆ.ರಂಗನಾಥ್, ಪ್ರಮುಖರಾದ ಕಲಗೋಡು ರತ್ನಾಕರ್, ಎಂ ಪ್ರವೀಣ್ ಕುಮಾರ್ , ಹೆಚ್.ಪಾಲಾಕ್ಷಿ ಎಸ್.ಎಂ ಶರತ್, ಹೆಚ್ ಪಿ ಗಿರೀಶ್, ಬಿ.ಲೋಕೇಶ್, ಎಸ್.ಕುಮರೇಶ್, ಬಡಾವಣೆಯ ಪ್ರಮುಖರಾದ ಬಸವರಾಜ್ , ಚಂದ್ರು ಗೆಡ್ಡೆ , ಪ್ರಕಾಶ್, ಕೆ ಎಲ್ ಪವನ್ ಮೊದಲಾದವರಿದ್ದರು.

Previous post ಚಿಕ್ಕಬಳ್ಳಾಪುರ – ರಸ್ತೆ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ : 13 ಮಂದಿ ಸಾವು!
Next post ಶಿವಮೊಗ್ಗ ಸ್ಮಾರ್ಟ್ ಸಿಟಿ ಅಕ್ರಮ ಕುರಿತಂತೆ ತನಿಖೆ : ಸಿಎಂ ವಿವೇಚನೆಗೆ – ಸಚಿವ ಮಧು ಬಂಗಾರಪ್ಪ