ಶಿವಮೊಗ್ಗ ಸ್ಮಾರ್ಟ್ ಸಿಟಿ ಅಕ್ರಮ ಕುರಿತಂತೆ ತನಿಖೆ : ಸಿಎಂ ವಿವೇಚನೆಗೆ – ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ, ಅ. 27: ‘ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮದ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ತನಿಖೆಯ ಸ್ವರೂಪ ಯಾವ ರೀತಿಯಲ್ಲಿರಬೇಕು ಎಂಬುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 1 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಆದರೆ ಸಾರ್ವಜನಿಕ ವಲಯದಿಂದ ವ್ಯಾಪಕ ದೂರುಗಳು ಕೇಳಿಬಂದಿವೆ. ದೊಡ್ಡಮಟ್ಟದಲ್ಲಿ ತನಿಖೆ ನಡೆಸಬೇಕೆಂಬುವುದು ಜನರ ಅಪೇಕ್ಷೆಯಾಗಿದೆ. ಅದರಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸಾವಿರ ಕೋಟಿ ರೂ. ದೊಡ್ಡ ಮೊತ್ತವಾಗಿದೆ. ಈ ಅನುದಾನದಲ್ಲಿ ಶಿವಮೊಗ್ಗವನ್ನು ಸಿಂಗಾಪೂರ ಮಾಡಬಹುದಾಗಿತ್ತು. ಹಿಂದಿನವರು ಏನೇನು ಮಾಡಿದ್ದಾರೆ ಎಂಬುವುದು ಗೊತ್ತಿಲ್ಲ. ಆದರೆ ತಪ್ಪಾಗಿದೆ. ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಅತ್ಯಂತ ತ್ವರಿತಗತಿಯಲ್ಲಿ ತನಿಖೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿ ಈ ಹಿಂದೆ ಸಂಚರಿಸುತ್ತಿದ್ದ ಜೆನ್ ನರ್ಮ್ ಯೋಜನೆಯ ಸರ್ಕಾರಿ ಸಿಟಿ ಬಸ್ ಗಳ ಸಂಚಾರ ಸ್ಥಗಿತಗೊಂಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಜೊತೆ ಸಮಾಲೋಚಿಸಲಾಗುವುದು. ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೆ ಕ್ರಮಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದೆ. ಇದರ ಅನುಕೂಲ ನಾಗರೀಕರಿಗೆ ಲಭ್ಯವಾಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರ ಅಭಿವೃದ್ದಿಪಡಿಸಿರುವ ವಾಜಪೇಯಿ ಲೇಔಟ್ ನ ನಿವೇಶನ ಹಂಚಿಕೆ ವಿವಾದದ ಕುರಿತಂತೆ ಮಾಹಿತಿಯಿಲ್ಲ. ಈ ಕುರಿತಂತೆ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಶಿವಮೊಗ್ಗ ನಗರದಲ್ಲಿ ಅತ್ಯಾಧುನಿಕ ಜಿಲ್ಲಾಡಳಿತ ಭವನ ನಿರ್ಮಾಣದ ಕುರಿತಂತೆ ಪ್ರಸ್ತಾವನೆಯಿದ್ದು, ಈಗಾಗಲೇ ಅನುದಾನ ಕೂಡ ಬಿಡುಗಡೆಯಾಗಿದೆ ಎಂದು ಇದೇ ವೇಳೆ ಸಚಿವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಕಠಿಣ ಕ್ರಮ : ಶಿಕ್ಷಕರಿಗೆ ಎಚ್ಚರಿಕೆ
ಯಾವುದೇ ಕಾರಣಕ್ಕೂ ಶಾಲೆಗಳಲ್ಲಿನ ಶೌಚಾಲಯ ಸ್ವಚ್ಛತೆಗೆ ಮಕ್ಕಳ ಬಳಕೆ ಮಾಡಬಾರದು. ಒಂದು ವೇಳೆ ಈ ರೀತಿಯ ಘಟನೆಗಳು ನಡೆದರೆ ಸಂಬಂಧಿಸಿದ ಶಾಲೆಯ ಶಿಕ್ಷಕರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಶಾಲೆಗಳ ನಿರ್ವಹಣೆಗೆ ನೀಡಲಾಗುತ್ತಿದ್ದ ಅನುದಾನ ಹೆಚ್ಚಳಗೊಳಿಸಲಾಗಿದೆ. ಮತ್ತಷ್ಟು ಏರಿಕೆ ಮಾಡುವ ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಹಂತಹಂತವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮತ್ತೊಂದು ಪೌಷ್ಠಿಕಾಂಶ ಆಹಾರ ನೀಡುವ ಚಿಂತನೆ ನಡೆಸಲಾಗುತ್ತಿದ್ದು, ಈಗಾಗಲೇ ಚರ್ಚೆ ನಡೆಸಲಾಗುತ್ತಿದೆ. ಪಠ್ಯ ಪುಸ್ತಕದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿಯೂ ತಜ್ಞರ ಜೊತೆ ಸಮಾಲೋಚಿಸಲಾಗುತ್ತಿದೆ. ಶಿಕ್ಷಕರ ನೇಮಕಾತಿ ಗೊಂದಲಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲೆಯ ಹಳ್ಳಿಗಳಲ್ಲಿ ಕುಡಿಯುವ ನೀರು ಸಮಸ್ಯ ಪರಿಹಾರಕ್ಕೆ, ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅನುಷ್ಠಾನಗೊಳಿಸಲಾಗುವುದು. ಗ್ರಾಮೀಣ ಭಾಗಗಳಿಗೆ ನಿಯಮಿತ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಇಂಧನ ಸಚಿವರ ಜೊತೆ ಚರ್ಚಿಸಿ, ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.