ಹುಲಿ ಉಗುರು ಪ್ರಕರಣ : ಸರ್ಕಾರಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೀಡಿದ ಸಲಹೆಯೇನು?
ತೀರ್ಥಹಳ್ಳಿ, ಅ. 28: ಹುಲಿ ಉಗುರು ಮತ್ತು ಇತರೆ ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳನ್ನು, ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದರೆ ಅವುಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲು ಸಾರ್ವಜನಿಕರಿಗೆ ಕಾಲಾವಕಾಶ ನೀಡಬೇಕು. ಈ ಸಂಬಂಧ ತಾತ್ಕಾಲಿಕ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಕುರಿತಂತೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆಯವರಿಗೆ ಪತ್ರ ಬರೆದಿದ್ದಾರೆ. ದೇಶ ಮತ್ತು ರಾಜ್ಯದಲ್ಲಿ ಅನೇಕ ಅನುಪಯುಕ್ತ ಕಾಯ್ದೆಗಳು ಜನಮಾನಸದ ಗಮನಕ್ಕೆ ಬಾರದೆ ಜೀವಂತವಾಗಿವೆ. ಅವುಗಳನ್ನು ಪುನರ್ ಪರಿಶೀಲಿಸಿ ವರ್ತಮಾನಕ್ಕೆ ಅಗತ್ಯಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡುವ ಅಥವಾ ರದ್ದುಗೊಳಿಸುವ ಕಾರ್ಯವಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ. ಕೆಲವರು ಹುಲಿ ಉಗುರು ಹಾಗೂ ಇತರೆ ಪ್ರಾಣಿಗಳಿಗೆ ಸಂಬಂಧಪಟ್ಟಂತೆ ಕಾನೂನುಬಾಹಿರವಾಗಿ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಇಂತಹ ವಸ್ತುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಲು ಅವಕಾಶ ಕಲ್ಪಿಸಬೇಕು.
ಇದರಿಂದ ಸರ್ಕಾರ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಕಾನೂನಿನ ಭಯದಿಂದ ಇಂತಹ ವಸ್ತುಗಳು ಕಸದ ಪಾಲಾಗುವ ಸಾಧ್ಯತೆಗಳಿವೆ ಎಂದು ಕಿಮ್ಮನೆ ರತ್ನಾಕರ್ ಅವರು ತಿಳಿಸಿದ್ದಾರೆ.