ದೋಷಪೂರಿತ ಸೈಲೆನ್ಸರ್ ಮಾರಾಟ : ಬ್ಲ್ಯಾಕ್ ಸ್ಮಿತ್ – ವೆಲ್ಡಿಂಗ್ ಅಂಗಡಿಗಳ ಮೇಲೆ ಪೊಲೀಸರ ದಾಳಿ!
ಶಿವಮೊಗ್ಗ, ಅ. 30: ದ್ವಿ ಚಕ್ರ ವಾಹನಗಳಲ್ಲಿ ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಹಾವಳಿ ನಿಯಂತ್ರಣಕ್ಕೆ ಖಡಕ್ ಕ್ರಮಕೈಗೊಂಡಿರುವ ಶಿವಮೊಗ್ಗ ಸಂಚಾರಿ ಠಾಣೆ ಪೊಲೀಸರೀಗ, ದೋಷಪೂರಿತ ಸೈಲೆನ್ಸರ್ ಮಾರಾಟ ಮಾಡುವ ಹಾಗೂ ಬೈಕ್ ಗಳಿಗೆ ಅಳವಡಿಸಿಕೊಡುವ ಬ್ಲ್ಯಾಕ್ ಸ್ಮಿತ್ – ವೆಲ್ಡಿಂಗ್ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಶಾಕ್ ನೀಡಿದ್ದಾರೆ!
ಸೋಮವಾರ ಶಿವಮೊಗ್ಗ ನಗರದ ಗಾರ್ಡನ್ ಏರಿಯಾ ರಸ್ತೆಗಳಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಅಂಗಡಿಗಳಲ್ಲಿದ್ದ ದೋಷಪೂರಿತ ಸೈಲೆನ್ಸರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದೋಷಪೂರಿತ ಸೈಲೆನ್ಸರ್ ಮಾರಾಟ ಮಾಡುವುದು ಹಾಗೂ ಇವುಗಳನ್ನು ದ್ವಿಚಕ್ರ ವಾಹನಗಳಿಗೆ ಅಳವಡಿಸಿಕೊಟ್ಟವರ ವಿರುದ್ದ ಭಾರತೀಯ ಮೋಟಾರು ಕಾಯ್ದೆ (ಐಎಂವಿ) ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಡಿವೈಎಸ್ಪಿ ಸುರೇಶ್ ಎಂ., ಟ್ರಾಫಿಕ್ ಠಾಣೆ ಇನ್ಸ್’ಪೆಕ್ಟರ್ ಡಿ. ಕೆ. ಸಂತೋಷ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಶ್ಚಿಮ ಸಂಚಾರಿ ಠಾಣೆ ಸಬ್ ಇನ್ಸ್’ಪೆಕ್ಟರ್ ತಿರುಮಲೇಶ‍್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.