ಶಿವಮೊಗ್ಗ, ತೀರ್ಥಹಳ್ಳಿ, ಉಡುಪಿಯಲ್ಲಿ ಕಳವು ಪ್ರಕರಣ : ಹಾವೇರಿ ಜಿಲ್ಲೆಯ ಇಬ್ಬರು ಯುವಕರ ಬಂಧನ!
ಶಿವಮೊಗ್ಗ, ಅ. 31: ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಉಡುಪಿಯ ವಿವಿಧೆಡೆ ಬಂಗಾರದ ಸರ ಮತ್ತು ವಾಹನ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ರಟ್ಟೆಹಳ್ಳಿ ತಾಲೂಕಿನ ಸರ್ವಜ್ಞ ನಗರದ ನಿವಾಸಿ ಆಕಾಶ್ (21) ಹಾಗೂ ರಾಣೆಬೆನ್ನೂರು ಪಟ್ಟಣದ ಸಿದ್ದೇಶ್ವರ ನಗರದ ನಿವಾಸಿ ಪ್ರವೀಣ್ ಹಡಗಲಿ (28) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಶಿವಮೊಗ್ಗದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ 2 ಸರಗಳ್ಳತನ ಕೃತ್ಯ, ತುಂಗಾ ನಗರ ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ 1 ಸರಗಳ್ಳತನ ಮತ್ತು ಉಡುಪಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ದ್ವಿ ಚಕ್ರ ವಾಹನ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇಲಾಖಡಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಬಂಧಿತರಿಂದ ಒಟ್ಟಾರೆ 6 ಕಳವು ಕೃತ್ಯಗಳಿಗೆ ಸಂಬಂಧಿಸಿದಂತೆ 9,48,600 ರೂ. ಮೌಲ್ಯದ 186 ತೂಕದ ಬಂಗಾರದ ಆಭರಣ, 1 ಲಕ್ಷ ರೂ. ಮೌಲ್ಯದ 2 ಬೈಕ್ ಸೇರಿದಂತೆ ಒಟ್ಟಾರೆ 10.48 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಚಂದ್ರಕಲಾ ಹೊಸಮನಿ, ಸಬ್ ಇನ್ಸ್’ಪೆಕ್ಟರ್ ಸುನೀಲ್ ಬಿ.ಸಿ., ಸಿಬ್ಬಂದಿಗಳಾದ ರಾಜು ಕೆ.ಆರ್., ಚಂದ್ರಾನಾಯ್ಕ್ ಬಿ, ಮಲ್ಲಪ್ಪ ಎಸ್.ಜಿ., ಅರುಣ್ ಕುಮಾರ್ ಎನ್.ಕೆ. ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.