ಬೆಂಗಳೂರು : ಗಣಿ – ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಯ ಬರ್ಬರ ಕೊಲೆ!
ತೀರ್ಥಹಳ್ಳಿ ತಾಲೂಕು ತುಡುಕಿ ಮೂಲದ ಪ್ರತಿಮಾರ ನಿಗೂಢ ಹತ್ಯೆ
ಬೆಂಗಳೂರು, ನ. 5: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೋರ್ವರನ್ನು ಚೂರಿಯಿಂದ ಇರಿದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ, ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಪ್ರತಿಮಾ (37) ಕೊಲೆಗೀಡಾದವರೆಂದು ಗುರುತಿಸಲಾಗಿದೆ. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಣಿ – ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಶನಿವಾರ ರಾತ್ರಿ ಘಟನೆ ನಡೆದಿದ್ದು, ಭಾನುವಾರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ.
ಪ್ರತಿಮಾ ಅವರು ತೀರ್ಥಹಳ್ಳಿ ತಾಲೂಕಿನವರಾಗಿದ್ದಾರೆ. ಇವರ ಪತಿ ಹಾಗೂ ಮಗ ತೀರ್ಥಹಳ್ಳಿಯ ತುಡುಕಿ ಎಂಬ ಗ್ರಾಮದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ದೊರೆತ ಕಾರಣದಿಂದ ಕಳೆದ 8 ವರ್ಷಗಳಿಂದ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಅವರು ಏಕಾಂಗಿಯಾಗಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ 8 ಗಂಟೆಗೆ ಪ್ರತಿಮಾ ಅವರನ್ನು ಕಚೇರಿಯಿಂದ ಮನೆಗೆ ಚಾಲಕ ಡ್ರಾಪ್ ಮಾಡಿ ತೆರಳಿದ್ದಾನೆ. ರಾತ್ರಿ ಪ್ರತಿಮಾ ಅವರ ಮೊಬೈಲ್ ಗೆ ಅವರ ಅಣ್ಣ ಕರೆ ಮಾಡಿದ್ದು ಕರೆ ರಿಸೀವ್ ಆಗಿಲ್ಲ. ಬೆಳಿಗ್ಗೆ ಮನೆ ಬಳಿ ಅವರು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ ಎನ್ನಲಾಗಿದ್ದು, ಪ್ರತಿಮಾ ಅವರ ಕೊಲೆ ಯೋಜಿತ ಕೃತ್ಯವೆಂಬ ಅನುಮಾನ ವ್ಯಕ್ತವಾಗಲಾರಂಭಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದು, ಪೊಲೀಸರ ತನಿಖೆಯ ನಂತರವಷ್ಟೆ ಕೊಲೆಗೆ ಕಾರಣವೆನೆಂಬುವುದು ಬೆಳಕಿಗೆ ಬರಬೇಕಾಗಿದೆ.