
ಮಾರಿಕಾಂಬಾ ಜಾತ್ರೆಯಲ್ಲಿ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ!
ಸಾಗರ, ಫೆ. 11: ಅತ್ಯಂತ ವೈಭವಯುತವಾಗಿ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ನಡೆಯುತ್ತಿದ್ದು, ಪ್ರತಿ ದಿನವು ಸಾವಿರಾರು ಜನರು ಆಗಮಿಸಿ ಮಾರಿಕಾಂಬಾ ದೇವರ ದರ್ಶನ ಪಡೆಯುತ್ತಿದ್ದಾರೆ. ಶುಕ್ರವಾರ, ಶನಿವಾರ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಪ್ರತಿ ದಿನ ದೇವರ ದರ್ಶನ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ಮಾರಿಕಾಂಬಾ ಜಾತ್ರಾ ಸಮಿತಿಯಿಂದ ನಿರಂತರ ಅನ್ನ ಸಂತರ್ಪಣೆ ನಡೆಯುತ್ತಿದೆ. ಜಾತ್ರಾ ಸಮಿತಿ ನಡೆಯುತ್ತಿರುವ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡ ಜನರು ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಸಾಗರ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಮಾರಿಕಾಂಬ ಜಾತ್ರೆ ಪ್ರಯುಕ್ತ ಆರಂಭದ ಮೊದಲ ದಿನದಿಂದಲೂ ಜನರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ದಿನ ನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಸೇರಿದಂತೆ ಒಟ್ಟಾರೆ 8 ರಿಂದ 10 ಸಾವಿರಕ್ಕೂ ಅಧಿಕ ಜನರು ಅನ್ನ ಸಂತರ್ಪಣೆಯಲ್ಲಿ ತಿಂಡಿ, ಊಟ ಮಾಡುತ್ತಿದ್ದಾರೆ.
ಮಾರಿಕಾಂಬ ಜಾತ್ರಾ ಸಮಿತಿಯಿಂದ ದಾಸೋಹ ಸಮಿತಿ ರಚಿಸಿದ್ದು, ಸಂಚಾಲಕ ವಿನಾಯಕ್ ಗುಡಿಗಾರ್, ಸಹ ಸಂಚಾಲಕ ನಿತ್ಯಾನಂದ ಶೆಟ್ಟಿ, ಭಾಸ್ಕರ್ ಆಚಾರ್ ಸೇರಿದಂತೆ 15-20 ಜನರ ತಂಡ ಅನ್ನ ಸಂತರ್ಪಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅಡುಗೆ ಭಟ್ಟರು ಹಾಗೂ ಸೇವಾ ಕಾರ್ಯಕರ್ತರು ಮಾರಿಕಾಂಬಾ ಜಾತ್ರೆಯ ದಾಸೋಹ ಕಾರ್ಯದಲ್ಲಿ ಸೇವೆ ಮಾಡುತ್ತಿದ್ದಾರೆ.
ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ನಡೆಯುತ್ತಿರುವ ದಾಸೋಹ ಕಾರ್ಯವು ಪ್ರತಿ ದಿನವು ವೈವಿಧ್ಯ ತಿಂಡಿ, ಸಿಹಿ ತಿನಿಸುಗಳನ್ನು ವಿತರಿಸಲಾಗುತ್ತಿದೆ. ಬೆಳಗ್ಗೆ ತಿಂಡಿಯಲ್ಲಿ ಕೇಸರಿಬಾತ್, ಉಪ್ಪಿಟ್ಟು, ಪಲಾವ್, ಚಿತ್ರಾನ್ನ, ಪುಳಿಯೋಗರೆ, ಅವಲಕ್ಕಿ ಪುಳಿಯೋಗರೆ, ಟೀ, ಕಾಫಿ ವಿತರಿಸಲಾಗುತ್ತಿದೆ.
ಮಧ್ಯಾಹ್ನ ಹಾಗೂ ರಾತ್ರಿ ನಡೆಯುವ ಊಟದ ವ್ಯವಸ್ಥೆಯಲ್ಲಿ ಪ್ರತಿ ದಿನ ಅಡುಗೆಯಲ್ಲಿ ಸಿಹಿ ತಿನಿಸು, ಪಲ್ಯ, ಅನ್ನ ಸಾಂಬರ್, ಮಜ್ಜಿಗೆ, ಉಪ್ಪಿನಕಾಯಿ ನೀಡಲಾಗುತ್ತಿದೆ. ಊಟದ ಸಿಹಿತಿನಿಸುವಿನಲ್ಲಿ ಕೇಸರಿಬಾತ್, ಪಾಯಸ, ಗೋದಿ ಪಾಯಸ, ಮೈಸೂರು ಪಾಕ್ ಹೋಳಿಗೆ ಸೇರಿದಂತೆ ದಿನಕ್ಕೊಂದು ಸಿಹಿ ನೀಡಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಜಾತ್ರೆಯಲ್ಲಿ ದಿನಪೂರ್ತಿ ನಿಂತು ಕೆಲಸ ಮಾಡುವ ಪೊಲೀಸ್, ಹೋಂಗಾರ್ಡ್ ಸಿಬ್ಬಂದಿಗೆ ಕುಳಿತು ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.