ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದ ಎರಡು ಬಾಕ್ಸ್ ಗಳು : ಸ್ಥಳಕ್ಕೆ ಪೊಲೀಸರು ದೌಡು – ಮುಂದುವರಿದ ಪರಿಶೀಲನೆ!
ಶಿವಮೊಗ್ಗ, ನ. 5: ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣ ಆವರಣ ಸಮೀಪ ಭಾನುವಾರ ಬೆಳಿಗ್ಗೆ ಗೋಣಿ ಚೀಲದಲ್ಲಿ ಮುಚ್ಚಿದ್ದ ಎರಡು ಪೆಟ್ಟಿಗೆಗಳು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ರೈಲ್ವೆ ನಿಲ್ದಾಣ ಪಾರ್ಕಿಂಗ್ ಸಮೀಪದ ಕಾಂಪೌಂಡ್ ಬಳಿ ಈ ಎರಡು ಬಾಕ್ಸ್ ಗಳು ಪತ್ತೆಯಾಗಿವೆ. ಅನುಮಾನಾಸ್ಪದವಾಗಿ ಬಿದ್ದಿದ್ದ ಪೆಟ್ಟಿಗೆಗಳನ್ನು ಗಮನಿಸಿದ ಸಾರ್ವಜನಿಕರು, ರೈಲ್ವೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಅವರು ಜಯನಗರ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಜಯನಗರ ಠಾಣೆ ಪೊಲೀಸರು, ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳವನ್ನು ಸ್ಥಳಕ್ಕೆ ಕರೆಯಿಸಿಕೊಂಡು ತಪಾಸಣೆ ನಡೆಸುತ್ತಿದ್ದಾರೆ. ಪೆಟ್ಟಿಗೆಗಳಿರುವ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
ಲಾಕ್ ಮಾಡಲಾಗಿದೆ : ಎರಡು ಪೆಟ್ಟಿಗೆಗಳಿಗೆ ಬೀಗ ಹಾಕಲಾಗಿದ್ದು, ಗೋಣಿ ಚೀಲದಿಂದ ಹೊಲಿಗೆ ಹಾಕಲಾಗಿದೆ. ಇದರೊಳಗೆ ಏನಿದೆ ಎಂಬುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ. ಈ ನಡುವೆ ಬೆಂಗಳೂರಿನಿಂದ ವಿಶೇಷ ತಪಾಸಣಾ ತಂಡವನ್ನು ಕರೆಯಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.