ಅನುಮಾನಾಸ್ಪದ ಬಾಕ್ಸ್ ಗಳಲ್ಲಿ ಇದ್ದಿದ್ದು ಅಡುಗೆ ಉಪ್ಪು, ರದ್ದಿ ವಸ್ತುಗಳು..!
ಶಿವಮೊಗ್ಗ, ನ. 6: ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣ ಆವರಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಎರಡು ಅಲ್ಯೂಮಿನಿಯಂ ಬಾಕ್ಸ್ ಗಳ ಒಳಗೆ ಉಪ್ಪು ಹಾಗೂ ರದ್ದಿ ವಸ್ತುಗಳಿರುವುದು ಪತ್ತೆಯಾಗಿದೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದರಿಂದ ಪೊಲೀಸ್ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ.
ಈ ಕುರಿತಂತೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ವ್ಯಾಟ್ಸಾಪ್ ನಲ್ಲಿ ಮಾಹಿತಿ ನೀಡಿದ್ದಾರೆ.
‘ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಅನುಮಾನಾಸ್ಪದ ಬಾಕ್ಸ್ ಗಳನ್ನುತೆರೆದು ಪರಿಶೀಲಿಸಿದ್ದು, ಈ ವೇಳೆ ಅದರೊಳಗೆ ಯಾವುದೇ ಸ್ಫೋಟಕ ವಸ್ತುಗಳಿರಲಿಲ್ಲ. ವೇಸ್ಟ್ (ರದ್ದಿ) ವಸ್ತುಗಳು, ಅಡುಗೆ ಉಪ್ಪು ಇರುವುದು ಕಂಡುಬಂದಿದೆ’ ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಭಾನುವಾರ ಬೆಳಿಗ್ಗೆ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದ ಕಾಂಪೌಂಡ್ ಬಳಿ ಗೋಣಿ ಚೀಲದಲ್ಲಿ ಹೊಲಿಗೆ ಹಾಕಿ ಮುಚ್ಚಿದ್ದ ಎರಡು ಅಲ್ಯೂಮಿನಿಯಂ ಪೆಟ್ಟೆಗೆಗಳು ಪತ್ತೆಯಾಗಿದ್ದವು. ಇವುಗಳನ್ನು ಗಮನಿಸಿದ ಸಾರ್ವಜನಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ರೈಲ್ವೆ ಪೊಲೀಸರು ಜಯನಗರ ಠಾಣೆಗೆ ಸಂದೇಶ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದ ಮೂಲಕ ತಪಾಸಣೆ ನಡೆಸಿದ್ದರು. ಆದರೆ ಬಾಕ್ಸ್ ಗಳಿಗೆ ಲಾಕ್ ಹಾಕಿದ್ದ ಕಾರಣದಿಂದ ಒಳಗಡೆ ಏನಿದೆ ಎಂಬುವುದು ಪತ್ತೆಯಾಗಿರಲಿಲ್ಲ.
ಮುನ್ನೆಚ್ಚರಿಕೆ ಕ್ರಮವಾಗಿ ಸದರಿ ಸ್ಥಳದ ಸುತ್ತಮುತ್ತ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ನಡುವೆ ಜಿಲ್ಲಾ ಪೊಲೀಸ್ ಇಲಾಖೆಯ ಕೋರಿಕೆಯಂತೆ ಬೆಂಗಳೂರಿನಿಂದ ಬಾಂಬ್ ಪತ್ತೆ, ನಿಷ್ಕ್ರೀಯಗೊಳಿಸುವ ತಂಡ ಭಾನುವಾರ ಸಂಜೆ ಆಗಮಿಸಿತ್ತು.
ಸುರಿಯುವ ಮಳೆಯಲ್ಲಿಯೇ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ್ದ ಸದರಿ ತಂಡವು, ಬಾಕ್ಸ್ ಗಳನ್ನು ಸ್ಪೋಟಿಸಿ ಅವುಗಳನ್ನು ತೆರೆದಿತ್ತು. ಒಳಗಡೆ ರದ್ದಿ ವಸ್ತುಗಳು ಹಾಗೂ ಉಪ್ಪು ಇರುವುದು ಬೆಳಕಿಗೆ ಬಂದಿತ್ತು.
ಇಬ್ಬರು ವಶಕ್ಕೆ : ನಿಗೂಢವಾದ ಕಾರಣ?
*** ಆಗುಂತಕರು ಕಾರಿನಲ್ಲಿ ಆಗಮಿಸಿ ಬಾಕ್ಸ್ ಗಳನಿಟ್ಟು ತೆರಳಿರುವುದು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಪೊಲೀಸರು ಸಿಸಿ ಕ್ಯಾಮರಾ ದೃಶ‍್ಯಾವಳಿಗಳ ಆಧಾರದ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ರೈಲ್ವೆ ನಿಲ್ದಾಣದ ಬಳಿ ಬಾಕ್ಸ್ ಗಳನಿಟ್ಟಿದ್ದು ಏಕೆ? ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ.