ತೀರ್ಥಹಳ್ಳಿಯಲ್ಲಿ ಪ್ರತಿಮಾ ಮೃತ ದೇಹದ ಅಂತ್ಯಸಂಸ್ಕಾರ : ಬೆಂಗಳೂರಿನಲ್ಲಿ ಮಾಜಿ ಕಾರು ಚಾಲಕ ಪೊಲೀಸ್ ವಶಕ್ಕೆ?
ತೀರ್ಥಹಳ್ಳಿ / ಬೆಂಗಳೂರು, ನ. 11: ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಗೀಡಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು, ಸೋಮವಾರ ಬೆಳಿಗ್ಗೆ ತೀರ್ಥಹಳ್ಳಿಯ ಕುರುವಳ್ಳಿ ಸೇತುವೆ ಸಮೀಪದ ಚಿತಾಗಾರದಲ್ಲಿ ನೆರವೇರಿತು.
ಭಾನುವಾರ ರಾತ್ರಿಯೇ ಪ್ರತಿಮಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ತೀರ್ಥಹಳ್ಳಿಗೆ ತರಲಾಗಿತ್ತು. ಅವರ ಪತಿಗೆ ಸೇರಿದ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಶಂಕಿತನ ಸೆರೆ: ಈ ನಡುವೆ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಮಾ ಅವರ ಬಳಿ ಈ ಹಿಂದೆ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಕಳೆದ ಒಂದು ವಾರದ ಹಿಂದಷ್ಟೆ ಪ್ರತಿಮಾ ಅವರು ಕಿರಣ್ ನನ್ನು ಚಾಲಕ ಹುದ್ದೆಯಿಂದ ತೆಗೆದು ಹಾಕಿದ್ದರು. ಇದರಿಂದ ಕುಪಿತಗೊಂಡಿದ್ದ ಕಿರಣ್ ಈ ಕೊಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ಬರ್ಬರ ಹತ್ಯೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರತಿಮಾ ಅವರನ್ನು, ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ಶನಿವಾರ ರಾತ್ರಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಭಾನುವಾರ ಬೆಳಿಗ್ಗೆ ಈ ಕೃತ್ಯ ಬೆಳಕಿಗೆ ಬಂದಿತ್ತು.