
ಟವಲ್ ನಿಂದ ಸ್ವಂತ ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಸರ ಅಪಹರಿಸಿದ್ದವ ಪೊಲೀಸ್ ಬಲೆಗೆ!
ಭದ್ರಾವತಿ, ನ. 7: ಟವಲ್ ನಿಂದ ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ ಆರೋಪಿಯೋರ್ವನನ್ನು, ಘಟನೆ ನಡೆದ 24 ಗಂಟೆಯೊಳಗೆ ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕುರುಬನಪುರ ಗ್ರಾಮದ ನಿವಾಸಿ ನಾಗರಾಜ್ ಕೆ. ಎನ್. (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 4.50 ಲಕ್ಷ ರೂ. ಮೌಲ್ಯದ 88 ಗ್ರಾಂ ತೂಕದ ಬಂಗಾರದ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ನಾಗರಾಜ್ ಕೆ.ಆರ್. ಮಾರ್ಗದರ್ಶನದಲ್ಲಿ ಸಿಪಿಐ ಶ್ರೀಶೈಲಕುಮಾರ್, ಪಿಎಸ್ಐ ರಮೇಶ್ ಟಿ, ಸಿಬ್ಬಂದಿಗಳಾದ ನವೀನ್, ಮಲ್ಲಿಕಾರ್ಜುನ, ರಾಕೇಶ್, ಗಿರೀಶ್, ವಿನೋದ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ.
ಘಟನೆ ಹಿನ್ನಲೆ: ನ. 6 ರಂದು ಆರೋಪಿಯು ಭದ್ರಾವತಿ ಪಟ್ಟಣದ ಕಡದಕಟ್ಟೆಯಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಆಗಮಿಸಿದ್ದ. ಈ ವೇಳೆ ತನ್ನ ಬಳಿಯಿದ್ದ ಟವಲ್ ನಿಂದ ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ.
ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 394 ರ ಅಡಿ ಪ್ರಕರಣ ದಾಖಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.