
ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಧಾರಾಕಾರ ವರ್ಷಧಾರೆ..!
ಶಿವಮೊಗ್ಗ, ನ. 8: ಶಿವಮೊಗ್ಗ ನಗರದ ವಿವಿಧೆಡೆ ಬುಧವಾರ ಬೆಳ್ಳಂಬೆಳ್ಳಿಗ್ಗೆ ಗುಡುಗು ಸಹಿತ ಭಾರೀ ವರ್ಷಧಾರೆಯಾಯಿತು. ಇದರಿಂದ ಬಿಸಿಲ ಬೇಗೆಗೆ ಕಾದ ಕಾವಲಿಯಂತಾಗಿದ್ದ ನಗರದಲ್ಲಿ ತಣ್ಣನೆ ವಾತಾವರಣ ನೆಲೆಸುವಂತಾಯಿತು.
ಬೆಳಿಗ್ಗೆ ಸರಿಸುಮಾರು 7.30 ಕ್ಕೆ ಆರಂಭವಾದ ಮಳೆಯು ಸುಮಾರು 1 ಗಂಟೆಗೂ ಅಧಿಕ ಕಾಲ ಎಡೆಬಿಡದೆ ಸುರಿಯಿತು. ಧಾರಾಕಾರ ವರ್ಷಧಾರೆಯಿಂದ ನಗರದ ಹಲವೆಡೆ ಚರಂಡಿ ಹಾಗೂ ರಾಜಕಾಲುವೆಗಳು ಉಕ್ಕಿ ಹರಿದವು. ಇದರಿಂದ ಕೆಲವೆಡೆ ರಸ್ತೆಗಳು ಜಲಾವೃತವಾಗಿದ್ದವು. ಬೆಳ್ಳಂಬೆಳಿಗ್ಗೆ ಮಳೆಯಿಂದ ಕೆಲಸಕಾರ್ಯಗಳಿಗೆ ತೆರಳುವವರು ಕೊಂಚ ತೊಂದರೆ ಎದುರಿಸುವಂತಾಯಿತು.
ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣದಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕಾರಣದಿಂದ ಹಲವೆಡೆ ಯೆಲ್ಲೋ ಅಲರ್ಟ್ ಘೋಷಿಸಿದೆ.