
ಶಿವಮೊಗ್ಗ : ಮಳೆಗೆ ನೆಲಕ್ಕೊರಗುತ್ತಿರುವ ಮೆಕ್ಕೆಜೋಳ ಬೆಳೆ!
ಶಿವಮೊಗ್ಗ, ನ. 9: ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣದಿಂದ, ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದ ಹಲವೆಡೆ ವರ್ಷಧಾರೆಯಾಗಲಾರಂಭಿಸಿದೆ.
ಈ ನಡುವೆ ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧೆಡೆ ಹಿಂಗಾರು ಮಳೆ ಚುರುಕುಗೊಂಡಿದೆ. ಬುಧವಾರ ಬೆಳಿಗ್ಗೆ ಭಾರೀ ಮಳೆಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ರಾತ್ರಿ ಕೂಡ ವರ್ಷಧಾರೆಯಾಯಿತು.
ಮುಂಗಾರು ಮಳೆ ಕೈಕೊಟ್ಟ ಪರಿಣಾಮದಿಂದ ಜಿಲ್ಲೆಯಾದ್ಯಂತ ಈಗಾಗಲೇ ಬರಗಾಲದ ಸ್ಥಿತಿ ಆವರಿಸಿದೆ. ಮತ್ತೊಂದೆಡೆ, ಹಿಂಗಾರು ಮಳೆ ಕೂಡ ಕೈಕೊಡುವ ಲಕ್ಷಣಗಳು ಕೂಡ ಗೋಚರವಾಗಿದ್ದವು. ಇತ್ತೀಚೆಗೆ ಹವಾಮಾನ ವೈಪರೀತ್ಯ ಕಾರಣದಿಂದ, ಹಿಂಗಾರು ಮಳೆ ಚುರುಕುಗೊಂಡಿದೆ. ಇದು ಸಹಜವಾಗಿಯೇ ಹೊಸ ನಿರೀಕ್ಷೆ ಮೂಡಿಸಿದೆ.
ಆದರೆ ಕಟಾವಿಗೆ ಬಂದಿರುವ ಮೆಕ್ಕೆಜೋಳ ಬೆಳೆಗಾರರಿಗೆ, ಪ್ರಸ್ತುತ ಬೀಳುತ್ತಿರುವ ವರ್ಷಧಾರೆ ಹೊರೆಯಾಗಿ ಪರಿಣಮಿಸಿದೆ. ಹಲವೆಡೆ ಮಕ್ಕೆಜೋಳ ತೆನೆಗಳು ನೆಲಕ್ಕುರುಳಲಾರಂಭಿಸಿದೆ. ತೆನೆಯಲ್ಲಿಯೇ ಬೀಜಗಳು ಮೊಳಕೆಯೊಡಯಲಾರಂಭಿಸಿವೆ!
‘ಮಳೆ ಕೊರತೆಯ ನಡುವೆಯೂ, ಕಷ್ಟಪಟ್ಟು ಬೆಳೆ ಬೆಳೆಯಲಾಗಿತ್ತು. ಫಸಲು ಕಟಾವಿಗೆ ಬಂದಿದೆ. ಇದೀಗ ಬೀಳುತ್ತಿರುವ ಮಳೆಯಿಂದ ಮೆಕ್ಕೆಜೋಳ ತೆನೆಗಳು ನೆಲಕ್ಕುರಳಲಾರಂಭಿಸಿವೆ’ ಎಂದು ಶಿವಮೊಗ್ಗ ತಾಲೂಕು ಸೋಮಿನಕೊಪ್ಪ ಭಾಗದ ಕೆಲ ಮೆಕ್ಕೆಜೋಳ ಬೆಳೆಗಾರರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಹಾಗೆಯೇ ಕಟಾವು ಮಾಡಿ ಹಸನು ಮಾಡಲು ಹಾಕಿದ್ದ ಮೆಕ್ಕೆಜೋಳ ಬೀಜಗಳನ್ನು ಬಿಸಿಲಿಗೆ ಒಣಗಿಸಲು ಹರಸಾಹಸ ಪಡುವಂತಾಗಿದೆ. ಮಳೆಗೆ ನೆನೆಯದಂತೆ ಹಗಲಿರುಳು ಮೆಕ್ಕೆಜೋಳ ರಾಶಿ ಕಾಯುವಂತಾಗಿದೆ ಎಂದು ಕೆಲ ರೈತರು ತಿಳಿಸುತ್ತಾರೆ.