
ನೆನೆಗುದಿಗೆ ಬಿದ್ದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಆಡಳಿತಾತ್ಮಕ ವಿಷಯಗಳು : ಗಮನಹರಿಸುವರೆ ಜಿಲ್ಲಾ ಉಸ್ತುವಾರಿ ಸಚಿವರು..?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ನ. 10: ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ, ಶಿವಮೊಗ್ಗ ಜಿಲ್ಲೆಯ ಪ್ರಮುಖ ಆಡಳಿತಾತ್ಮಕ ವಿಷಯಗಳು ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಜನರಿಗೆ ಅನುಕೂಲಕರವಾದ ಯೋಜನೆಗಳು ಅಕ್ಷರಶಃ ಮೂಲೆಗುಂಪಾಗಿವೆ. ಆಡಳಿತಗಾರರ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿವೆ!
ಜಿಲ್ಲೆಯವರೇ ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರದ ಹಂತದಲ್ಲಿ ಹೈಪ್ರೊಫೈಲ್ ಸಚಿವ ಸ್ಥಾನಗಳನ್ನು ಅಲಂಕರಿಸಿದರು ಪ್ರಮುಖ ಆಡಳಿತಾತ್ಮಕ ಬೇಡಿಕೆಗಳು ಕಾರ್ಯರೂಪಕ್ಕೆ ಬಂದಿಲ್ಲವಾಗಿದೆ. ಕೆಲ ಯೋಜನೆಗಳ ಕಡತಗಳು, ನಾನಾ ಕಾರಣಗಳಿಂದ ಸರ್ಕಾರದ ಹಂತದಲ್ಲಿ ಧೂಳು ಹಿಡಿಯುತ್ತಿವೆ.
ಬದಲಾದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯಿಂದ ಆ ಪಕ್ಷಕ್ಕೆ ಸೇರಿದ ಮೂವರು ಶಾಸಕರು ಆಯ್ಕೆಯಾಗಿದ್ದಾರೆ. ಇದರಲ್ಲಿ ಮಧು ಬಂಗಾರಪ್ಪ ಅವರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗುವ ಅವಕಾಶ ಕೂಡ ಲಭ್ಯವಾಗಿದೆ.
ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮಹತ್ತರ ಜವಾಬ್ದಾರಿಯೂ ಸಿಕ್ಕಿದೆ. ಕಳೆದ ಹಲವು ವರ್ಷಗಳ ನಂತರ ಜಿಲ್ಲೆಯ ಸಚಿವರಿಗೆ ‘ಉಸ್ತುವಾರಿ’ ಯ ಜವಾಬ್ದಾರಿ ಲಭ್ಯವಾಗಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹೊರ ಜಿಲ್ಲೆಯ ಸಚಿವರುಗಳು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಿದ್ದರು. ಕಾಟಾಚಾರಕ್ಕೆಂಬಂತೆ ಕಾರ್ಯನಿರ್ವಹಣೆ ಮಾಡಿದ್ದರು.
ಈ ಕಾರಣದಿಂದ ಮಧು ಬಂಗಾರಪ್ಪ ಅವರ ಮೇಲೆ ಸಾಕಷ್ಟು ನಿರೀಕ್ಷೆ ಜಿಲ್ಲೆಯ ಜನಮಾನಸದಲ್ಲಿದೆ. ಜಿಲ್ಲೆಯ ಸಂಬಂಧಿಸಿದಂತೆ ಪ್ರಮುಖ ಆಡಳಿತಾತ್ಮಕ ವಿಷಯಗಳ ಅನುಷ್ಠಾನದತ್ತ ಅವರು ಚಿತ್ತ ಹರಿಸಬೇಕಾಗಿದೆ. ಈ ಸಂಬಂಧ ಸರ್ಕಾರದ ಹಂತದಲ್ಲಿ ಸಂಬಂಧಿಸಿದ ಇಲಾಖೆ ಸಚಿವರು, ಅಧಿಕಾರಿಗಳ ಜೊತೆ ಸಮಾಲೋಚಿಸಿ ಜನಪರ ಯೋಜನೆಗಳ ಕಾರ್ಯಗತದತ್ತ ಆದ್ಯ ಗಮನಹರಿಸಬೇಕಾಗಿದೆ ಎಂಬುವುದು ಜಿಲ್ಲೆಯ ನಾಗರೀಕರ ಆಗ್ರಹವಾಗಿದೆ.
-: ಪ್ರಮುಖಾಂಶಗಳು :-
* ಭದ್ರಾವತಿ ಎಂಪಿಎಂ ಕಾರ್ಖಾನೆ ಪುನಾರಾರಂಭಕ್ಕೆ ಕ್ರಮ
* ಶಿವಮೊಗ್ಗದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆ
* ಶಿವಮೊಗ್ಗ ಗ್ರಾಮಾಂತರ, ಆನವಟ್ಟಿ, ಹೊಳೆಹೊನ್ನೂರು, ಶಿರಾಳಕೊಪ್ಪ ತಾಲೂಕು ಕೇಂದ್ರ ರಚನೆ
* ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್ ಸ್ಥಾಪನೆ
* ಸಾಗರ ಪಟ್ಟಣದಲ್ಲಿ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪನೆ
* ಶಿವಮೊಗ್ಗದಲ್ಲಿ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ
* ಶಿವಮೊಗ್ಗದಲ್ಲಿ ರಾಜ್ಯಕ್ಕೆ ಮಾದರಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅನುದಾನ
* ಶಿವಮೊಗ್ಗ, ಭದ್ರಾವತಿಯಲ್ಲಿ ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೆ ಕ್ರಮ
* ಶಿವಮೊಗ್ಗ ನಗರದಲ್ಲಿ ಪ್ರತ್ಯೇಕ ಸಿಟಿ ಬಸ್ ನಿಲ್ದಾಣ ಸ್ಥಾಪನೆ
* ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ವಾರ್ಡ್ ಗಳ ಸಂಖ್ಯೆ ಹೆಚ್ಚಳ
* ಆಯುಷ್ ವಿಶ್ವ ವಿದ್ಯಾಲಯ ಕಾರ್ಯಾರಂಭಕ್ಕೆ ಕ್ರಮ
* ನಗರಾಭಿವೃದ್ದಿ ಪ್ರಾಧಿಕಾರ, ಸ್ಥಳಿಯಾಡಳಿತಗಳಿಂದ ಆಶ್ರಯ ಬಡಾವಣೆಗಳ ರಚನೆ
* ಶಿವಮೊಗ್ಗ ಕೇಂದ್ರವಾಗಿಟ್ಟುಕೊಂಡು ಪ್ರತ್ಯೇಕ ವಿದ್ಯುತ್ ಕಂಪೆನಿ ಸ್ಥಾಪನೆ
* ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳ ಅನುಷ್ಠಾನ
* ಅರಣ್ಯ – ಕಂದಾಯ ಬಗರ್ ಹುಕುಂ ಸಾಗುವಳಿ ಸಮಸ್ಯೆ ಪರಿಹಾರಕ್ಕೆ ಕ್ರಮ
* ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ಕಲ್ಪಿಸಿಕೊಡುವ ಕಾರ್ಯ
* ಅಭಿವೃದ್ದಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ