
ಆರಂಭವಾಗದ ದಕ್ಷಿಣ ಭಾರತದ ಮೊದಲ ಆಯುಷ್ ವಿಶ್ವವಿದ್ಯಾಲಯ : ಸಿಎಂ – ಡಿಸಿಎಂಗೆ ಆಗ್ರಹವೇನು?
ಶಿವಮೊಗ್ಗ, ನ. 10: ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯದ ಚಟುವಟಿಕೆ ಆರಂಭಕ್ಕೆ ಕ್ರಮಕೈಗೊಳ್ಳಬೇಕು. ತಕ್ಷಣವೇ ವಿಶೇಷ ಕರ್ತವ್ಯ ಅಧಿಕಾರಿ ನೇಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಆಗ್ರಹಿಸಿದೆ.
ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಅವರು ಶುಕ್ರವಾರ ಶಿವಮೊಗ್ಗದ ಮೀಡಿಯಾ ಹೌಸ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಳೆದ ಹಲವು ತಿಂಗಳುಗಳಿಂದ ಆಯುಷ್ ವಿವಿಗೆ ಆಡಳಿತಾಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲ. ಈ ಮೂಲಕ ವಿವಿಗೆ ಎಳ್ಳುನೀರು ಬಿಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿರವರ ಶಿಫಾರಸ್ಸು ಹಾಗೂ ಸಂಘಟನೆಯ ಒತ್ತಾಯದ ಮೇರೆಗೆ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗಕ್ಕೆ ಆಯುಷ್ ವಿವಿ ಮಂಜೂರುಗೊಳಿಸಿದ್ದರು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ವಿವಿಗೆ 200 ಕೋಟಿ ರೂ. ಮೀಸಲಿಟ್ಟು, 20 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದರು.
1-3-2023 ರಂದು ಡಾ. ಲೋಕೇಶ್ ಎಂಬುವರನ್ನು ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸರ್ಕಾರ ನಿಯೋಜಿಸಿತ್ತು. ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ವೇಳೆ ಡಾ.ಲೋಕೇಶ್ ಅವರನ್ನು ಚುನಾವಣಾ ಆಯೋಗವು ಚುನಾವಣಾ ಉದ್ದೇಶಕ್ಕಾಗಿ ವರ್ಗಾವಣೆಗೊಳಿಸಿತ್ತು. ಆದರೆ ನಂತರ ವಿವಿಯ ಹುದ್ದೆಗೆ ಯಾರೊಬ್ಬರನ್ನು ಇಲ್ಲಿಯವರೆಗೂ ನಿಯೋಜಿಸಿಲ್ಲ ಎಂದು ದೂರಿದ್ದಾರೆ.
ಈಗಾಗಲೇ ಸಂಘಟನೆಯು ಹಲವು ಬಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ವಿವಿಗೆ ವಿಶೇಷ ಕರ್ತವ್ಯ ಅಧಿಕಾರಿ ನಿಯೋಜನೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣವೇ ವಿವಿಗೆ ಕರ್ತವ್ಯ ಅಧಿಕಾರಿ ನೇಮಕಕ್ಕೆ ಸಿಎಂ, ಡಿಸಿಎಂ ಕ್ರಮಕೈಗೊಳ್ಳಬೇಕು ಎಂದು ಕಲ್ಲೂರು ಮೇಘರಾಜ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.