
ಶಿವಮೊಗ್ಗದಲ್ಲಿ ಪಟಾಕಿ ಮಾರಾಟ ಜೋರು : ಮಾರುಕಟ್ಟೆಗಳಲ್ಲಿ ಜನಜಂಗುಳಿ – ಭರ್ಜರಿ ವಹಿವಾಟು!
ಶಿವಮೊಗ್ಗ, ನ. 12: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ – ಸಡಗರ ಶಿವಮೊಗ್ಗದಲ್ಲಿ ಕಳೆಗಟ್ಟಲಾರಂಭಿಸಿದೆ. ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಭಾನುವಾರ ಜೋರಾಗಿತ್ತು. ನಗರದ ಪ್ರಮುಖ ಮಾರುಕಟ್ಟೆಗಳು, ರಸ್ತೆ, ವೃತ್ತಗಳಲ್ಲಿ ಜನಜಂಗುಳಿ ಕಂಡುಬಂದಿತು.
ಹಬ್ಬದ ಪ್ರಮುಖ ಆಕರ್ಷಣೆಯಾದ ಪಟಾಕಿ ಮಾರಾಟ ಬಿರುಸುಗೊಂಡಿದೆ. ಈ ಬಾರಿ ಫ್ರೀಡಂ ಪಾರ್ಕ್ ಆವರಣದಲ್ಲಿ ಪಟಾಕಿ ಮಾರಾಟದ ಸ್ಟಾಲ್ ಗಳನ್ನು ಹಾಕಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಸುಮಾರು 50 ಕ್ಕೂ ಅಧಿಕ ಪಟಾಕಿ ಮಾರಾಟ ಮಳಿಗೆಗಳು ತಲೆಎತ್ತಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿಶಾಲ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ, ಯಾವುದೇ ಗೊಂದಲ – ಗಡಿಬಿಡಿಗೆ ಆಸ್ಪದವಾಗದಂತೆ ವಹಿವಾಟು ನಡೆಯಲು ಸಹಕಾರಿಯಾಗಿತ್ತು. ಹಾಗೆಯೇ ನಾಗರೀಕರ ವಾಹನಗಳ ನಿಲುಗಡೆಯೂ ಸುಲಲಿತವಾಗುವಂತಾಗಿತ್ತು.
ಕಳೆದ ಬಾರಿಗಿಂತ ಈ ಬಾರಿ ಪಟಾಕಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಆದಾಗ್ಯೂ ಬೇಡಿಕೆ ಪ್ರಮಾಣ ಕಡಿಮೆಯಾಗಿಲ್ಲ. ಫ್ರೀಡಂ ಪಾರ್ಕ್ ಆವರಣದಲ್ಲಿ ಭಾರೀ ಸಂಖ್ಯೆಯ ನಾಗರೀಕರು ಪಟಾಕಿ ಖರೀದಿಗೆ ದೌಡಾಯಿಸುತ್ತಿದ್ದುದು ಕಂಡುಬಂದಿತು. ಉಳಿದಂತೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ದಟ್ಟಣೆ: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದಾಗ್ಯೂ ಖರೀದಿ ಪ್ರಮಾಣ ಕಡಿಮೆಯಾಗಿಲ್ಲ. ನಗರದ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತದಲ್ಲಿ ಭಾರೀ ಜನದಟ್ಟಣೆ ಕಂಡುಬಂದಿತು. ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಯಲ್ಲಿ ನಾಗರೀಕರು ತಲ್ಲೀನರಾಗಿದ್ದುದು ಕಂಡುಬಂದಿತು.
ಉಳಿದಂತೆ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿಯೂ ಅಗತ್ಯ ವಸ್ತುಗಳ ಮಾರಾಟ ಮಾಡುತ್ತಿದ್ದುದು ಕಂಡುಬಂದಿತು. ಮಣ್ಣಿನ ಹಣತೆ, ಆಕಾಶ ಬುಟ್ಟಿಗಳಿಗೆ ಸಖತ್ ಬೇಡಿಕೆ ಕಂಡುಬಂದಿತು. ಹಾಗೆಯೇ ಗೋ ಪೂಜೆ ವಸ್ತುಗಳ ಮಾರಾಟವೂ ಜೋರಾಗಿತ್ತು.