
ಕರ್ನಾಟಕ ಹಾಲು ಮಹಾಮಂಡಳಿಯಿಂದ ಕ್ವಿಂಟಾಲ್ಗೆ 2250 ರೂ. ದರದಲ್ಲಿ ಮೆಕ್ಕೆಜೋಳ ಖರೀದಿ
ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ರೈತರ ಗಮನಕ್ಕೆ…
ಶಿವಮೊಗ್ಗ, ನ. 13: ಕರ್ನಾಟಕ ಹಾಲು ಮಹಾಮಂಡಳಿಯು ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಖರೀದಿಸಲು ನಿರ್ಧರಿಸಿದೆ.
ಪ್ರತಿ ಕ್ವಿಂಟಾಲ್‍ಗೆ 2250 ರೂ. ದರದಲ್ಲಿ ಖರೀದಿಸಲಾಗುತ್ತಿದೆ. ಮೆಕ್ಕೆಜೋಳ ಬೆಳೆದಿರುವ ಆಸಕ್ತ ರೈತರು ಸಮೀಪದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಂದು ಕೆ.ಜಿ ಪ್ರಮಾಣದಷ್ಟು ಮೆಕ್ಕೆಜೋಳದ ಮಾದರಿಯನ್ನು ನೀಡಿ, ಫ್ರೂಟ್ಸ್ (FRUTTS) ತಂತ್ರಾಂಶದಲ್ಲಿ ನೊಂದಾವಣೆಯಾಗಿರುವ ಸಂಖ್ಯೆಯೊಂದಿಗೆ ನೊಂದಾಯಿಸಿಕೊಳ್ಳಬಹುದಾಗಿದೆ.
ಶಿಕಾರಿಪುರ ಪಶು ಆಹಾರ ಘಟಕಕ್ಕೆ ಅವಶ್ಯವಿರುವ 30000 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಪ್ರದೇಶದ ರೈತರುಗಳಿಂದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಕ್ಷೀರ ಸಿರಿ ಮತ್ತು ಸರಕಾರದ ಕೃಷಿ ಇಲಾಖೆ ಸಿದ್ಧಪಡಿಸಿರುವ ಫ್ರೂಟ್ಸ್ ತಂತ್ರಾಂಶದ ಮೂಲಕ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
ಪ್ರತಿ ಒಬ್ಬ ರೈತರಿಂದ ಗರಿಷ್ಠ100 ಕ್ವಿಂಟಾಲ್ ಮೆಕ್ಕೆಜೋಳ ಸರಬರಾಜಿಗೆ ಸೀಮಿತಗೊಳಿಸಿದ್ದು, ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ರೈತರೇ ನೇರವಾಗಿ ಉತ್ತಮ ಗುಣಮಟ್ಟದ ಮೆಕ್ಕೆಜೋಳವನ್ನು ತಲಾ ಐವತ್ತು ಕೆ.ಜಿ ತೂಕದಂತೆ ಗೋಣಿ ಚೀಲಗಳಲ್ಲಿ ಸರಬರಾಜು ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 96060-12571 ಮತ್ತು ಇಮೇಲ್ ವಿಳಾಸ : kmfcfps@gmail.com ನ್ನು ಸಂಪರ್ಕಿಸಬಹುದೆಂದು ಶಿಕಾರಿಪುರ ಪಶು ಆಹಾರ ಘಟಕದ ಪ್ರಕಟಣೆ ತಿಳಿಸಿದೆ.