
ಕಾರಿನಲ್ಲಿ ಗಾಂಜಾ ಮಾರಾಟ : ಶಿವಮೊಗ್ಗದಲ್ಲಿ ಇಬ್ಬರು ಯುವಕರ ಬಂಧನ!
ಶಿವಮೊಗ್ಗ, ನ. 14: ಕಾರಿನಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ನ. 13 ರಂದು ಶಿವಮೊಗ್ಗ ನಗರದ ಹೊರವಲಯ ಅನುಪಿನಕಟ್ಟೆ ರಸ್ತೆಯ ತುಂಗಾ ನಾಲೆ ಸೇತುವೆ ಬಳಿ ನಡೆದಿದೆ.
ಸಾಗರ ಪಟ್ಟಣದ ರಾಮನಗರದ ನಿವಾಸಿ ಅಲ್ತಾಫ್ ಯಾನೆ ಮಚ್ಚಿ (38) ಹಾಗೂ ಶಿವಮೊಗ್ಗದ ಟಿಪ್ಪುನಗರದ ನಿವಾಸಿ ಇನಾಯತ್ (29) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಿಂದ 2,10,000 ರೂ. ಮೌಲ್ಯದ 5 ಕೆ.ಜಿ 250 ಗ್ರಾಂ ತೂಕದ ಒಣ ಗಾಂಜಾ, 2,50,000 ರೂ. ಮೌಲ್ಯದ ಸ್ಕೋಡ ಕಾರು, 2 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಾಲರಾಜ್, ಇನ್ಸ್’ಪೆಕ್ಟರ್ ಮಂಜುನಾಥ್, ಸಬ್ ಇನ್ಸ್’ಪೆಕ್ಟರ್ ಶಿವಪ್ರಸಾದ್ ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.