
ಮಹಿಳೆಯಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ!
ಶಿಕಾರಿಪುರ, ನ. 16: ಮಹಿಳೆಯೋರ್ವರಿಂದ 6 ಸಾವಿರ ರೂ. ಲಂಚ ಪಡೆಯುವ ವೇಳೆ, ಶಿಕಾರಿಪುರ ತಾಲೂಕು ಬಗನಕಟ್ಟೆ ಗ್ರಾಮ ಪಂಚಾಯ್ತಿ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.
ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಎಂದು ಗುರುತಿಸಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ಪ್ರಕರಣದ ಹಿನ್ನೆಲೆ : ಶಿಕಾರಿಪುರ ತಾಲೂಕು ಸಂಕ್ಲಾಪುರದ ನಿವಾಸಿ ಸಾಕಮ್ಮ ಎಂಬುವರ ಮನೆಯು, 2021 ರಲ್ಲಿ ಭಾರೀ ಮಳೆಯ ಕಾರಣದಿಂದ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದಿತ್ತು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತಂತೆ ಜಿಪಿಎಸ್ ನಲ್ಲಿ ಮಾಹಿತಿ ಸಂಗ್ರಹಿಸಿ ವರದಿ ಮಾಡಲು ಬಗನಕಟ್ಟೆ ಗ್ರಾಪಂ ಪಿಡಿಓ ಮಂಜುನಾಥ್ ರವರು ಸಾಕಮ್ಮರಿಗೆ 20 ಸಾವಿರ ರೂ. ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಸಾಕಮ್ಮರವರು 13 ಸಾವಿರ ರೂ. ನೀಡಿದ್ದರು.
ಸಾಕಮ್ಮರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ 5 ಲಕ್ಷ ರೂ. ಪರಿಹಾರ ಮಂಜೂರಾಗಿತ್ತು. ಮನೆಯ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ನೆರೆ ಸಂತ್ರಸ್ತರ ಪರಿಹಾರ ಧನ 1 ಲಕ್ಷ ರೂ. ಮಂಜೂರಾಗಿದ್ದು, ಇದನ್ನು ಬಿಡುಗಡೆ ಮಾಡಲು ಮತ್ತೇ 6000 ರೂ. ಲಂಚ ನೀಡುವಂತೆ ಪಿಡಿಓ ಡಿಮ್ಯಾಂಡ್ ಮಾಡಿದ್ದರು.
ಈ ಸಂಬಂಧ ನ.15 ರಂದು ಸಾಕಮ್ಮರವರು ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನ. 16 ರಂದು ಸಾಕಮ್ಮರಿಂದ ಪಿಡಿಓ 6 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.