
ಶಿವಮೊಗ್ಗದ ನಗರ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮ
ಶಿವಮೊಗ್ಗ, ನ. 17: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಶುಕ್ರವಾರ ಶಿವಮೊಗ್ಗ ನಗರದ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಹೊಸಮನಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿ, ಪುಸ್ತಕ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.
ಸಾರ್ವಜನಿಕರು ಗ್ರಂಥಾಲಯದಲ್ಲಿರುವ ಸಂಪನ್ಮೂಲ ಬಳಸಿಕೊಂಡು ಜ್ಞಾನಮಟ್ಟ ವೃದ್ದಿಸಿಕೊಳ್ಳಬೇಕು. ಹಾಗೆಯೇ ಓದುಗರ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳನ್ನು ಒದಗಿಸಬೇಕು ಎಂದು ಗ್ರಂಥಾಲಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಗ್ರಂಥಾಲಯ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಪಿ.ವೈ.ರಾಜೇಂದ್ರ ಕುಮಾರ್ ಅವರು ಮಾತನಾಡಿ, ಗ್ರಂಥಾಲಯ ವ್ಯವಸ್ಥೆ ಬೃಹದಾಕಾರವಾಗಿ ಬೆಳೆದಿದೆ. ಸಾಕಷ್ಟು ಶಾಖೆಗಳನ್ನು ಹೊಂದಿದೆ. ಪ್ರಸ್ತುತ ವರ್ಷ ರಾಜ್ಯಮಟ್ಟದ ಕಾರ್ಯಕ್ರಮ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನೆರವೇರಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕರಾದ ಚಂದ್ರಶೇಖರ್, ದಿವಾಕರ್, ಪಿ.ಆರ್.ತಿಪ್ಪೇಸ್ವಾಮಿ ಹಾಗೂ ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಹರೀಶ್ ಎಂ. ಆರ್., ಬಸವರಾಜ್ ಕೊಳ್ಳಿ ಸೇರಿದಂತೆ ಸಿಬ್ಬಂದಿಗಳು, ಓದುಗರು ಉಪಸ್ಥಿತರಿದ್ದರು.