
ಜನ ವಸತಿ ಪ್ರದೇಶದ ಬಳಿಯೇ ಚಿರತೆ ದಾಳಿಯಿಂದ ನಾಯಿ ಸಾವು ಶಂಕೆ! : ಅರಣ್ಯ ಇಲಾಖೆ ತಂಡ ಭೇಟಿ
ಶಿವಮೊಗ್ಗ, ನ. 17: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ, ಕೆ.ಹೆಚ್.ಬಿ ಪ್ರೆಸ್ ಕಾಲೋನಿ ಸುತ್ತಮುತ್ತ ಚಿರತೆ ಸಂಚರಿಸುತ್ತಿರುವ ಮಾಹಿತಿಗಳು ಕೇಳಿಬರುತ್ತಿರುವ ನಡುವೆಯೇ, ರಾಜ್ಯ ಹೆದ್ದಾರಿ ಪಕ್ಕದ ಖಾಸಗಿ ಲೇಔಟ್ ವೊಂದರ ಬಳಿ ಕಾಡು ಪ್ರಾಣಿಯೊಂದರ ದಾಳಿಯಿಂದ ಬೀದಿ ನಾಯಿಯೊಂದು ಮೃತಪಟ್ಟಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.
ಚಿರತೆ ದಾಳಿಯಿಂದಲೇ ನಾಯಿ ಸಾವನ್ನಪ್ಪಿರುವ ಶಂಕೆಯನ್ನು ಸ್ಥಳೀಯ ನಾಗರೀಕರು ವ್ಯಕ್ತಪಡಿಸುತ್ತಿದ್ದಾರೆ. ಇದು ಸ್ಥಳೀಯ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ.
ಶುಕ್ರವಾರ ಸಂಜೆ ಅರಣ್ಯ ಇಲಾಖೆ ಡಿ.ಆರ್.ಎಫ್.ಓ ಪಾಂಡುರಂಗ, ಫಾರೆಸ್ಟರ್ ಗಳಾದ ಮಂಜುನಾಥ್, ಇಫ್ತೀಕಾರ್ ಅಹ್ಮದ್, ವಾಚರ್ ಗಳಾದ ಹನುಮಂತ ಮೊದಲಾದವರು ಸ್ಥಳಕ್ಕೆ ಭೇಟಿಯಿತ್ತು ದಾಳಿಯಿಂದ ಮೃತಪಟ್ಟ ನಾಯಿಯನ್ನು ವೀಕ್ಷಿಸಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಸ್ಥಳೀಯ ನಿವಾಸಿಗಳು ಮಾತನಾಡಿ, ಇತ್ತೀಚೆಗೆ ಸಾಕಷ್ಟು ಬೀದಿ ನಾಯಿಗಳು ನಿಗೂಢವಾಗಿ ಕಣ್ಮರೆಯಾಗುತ್ತಿವೆ. ಈ ನಡುವೆ ನಾಯಿಯೊಂದು ಸಾವನ್ನಪ್ಪಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಅರಣ್ಯ ಇಲಾಖೆಯುವರು ಕತ್ತೆ ಕಿರುಬ ಕಾಡು ಪ್ರಾಣಿ ದಾಳಿಯಿಂದ ನಾಯಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ತಕ್ಷಣವೇ ಅರಣ್ಯ ಇಲಾಖೆಯು ಜನವಸತಿ ಪ್ರದೇಶದಲ್ಲಿ ಸಂಚರಿಸುತ್ತಿರುವ ಕಾಡು ಪ್ರಾಣಿಯ ಸೆರೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ಧಾರೆ.