Shimoga Govt Megan Hospital's rare surgery of the medical team: Life saving for a woman! ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ : ಮಹಿಳೆಗೆ ಜೀವದಾನ!

ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ : ಮಹಿಳೆಗೆ ಜೀವದಾನ!

ಶಿವಮೊಗ್ಗ, ನ. 18: ಪ್ರಪಂಚದಲ್ಲೇ ಅತೀ ವಿರಳವಾದ, ಅಪರೂಪದಲ್ಲಿ ಅಪರೂಪದ ‘ಬಾಂಬೆ ಬ್ಲಡ್ ಗ್ರೂಪ್’ ಹೊಂದಿರುವ ಹಾಗೂ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯ ಶಸ್ತ್ರಚಿಕಿತ್ಸೆ (ರಪ್ಚರಡ್ ಎಕ್ಟೋಪಿಕ್) ಯನ್ನು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿ ಮಹಿಳೆಯ ಜೀವ ಉಳಿಸಿದ್ದಾರೆ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಹಳೆ ಜೋಗದ ವೀರಭದ್ರಪ್ಪ ಎಂಬುವರ ಪತ್ನಿ ಬೇಬಿ (31) ಎಂಬುವವರು, ಹೊಟ್ಟೆ ನೋವಿನ ಸಮಸ್ಯೆಯ ಕಾರಣದಿಂದ ನ.12 ರಂದು ಆಸ್ಪತ್ರೆಯ ತುರ್ತು ಚಿಕಿತ್ಸೆ ವಿಭಾಗ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಅವರು ಒಂದೂವರೆ ತಿಂಗಳ ಗರ್ಭಿಣಿಯಾಗಿರುವುದು ಹಾಗೂ ಗರ್ಭಕೋಶದ ಬದಲು ಗರ್ಭನಾಳದಲ್ಲಿ ಗರ್ಭ ಧರಿಸಿರುವುದು (ಎಕ್ಟೋಪಿಕ್ ಪ್ರೆಗ್ನೆನ್ಸಿ) ತಿಳಿದುಬಂದಿತ್ತು.

ರಕ್ತ ತಪಾಸಣೆ ಮತ್ತು ಇತರೆ ಪರೀಕ್ಷೆ ನಡೆಸಿದಾಗ, ಹಿಮೋಗ್ಲೊಬಿನ್ ಪ್ರಮಾಣ 2.5 ಗ್ರಾಂ ಮತ್ತು ಬಿಪಿ 80/50 ಇದ್ದು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅರೆಪ್ರಜ್ಞಾವಸ್ಥೆ ಸ್ಥಿತಿಗೆ ತಲುಪಿದ್ದರು. ಸ್ಕ್ಯಾನಿಂಗ್‍ನಲ್ಲಿ ಗರ್ಭನಾಳದಲ್ಲಿ ಧರಿಸಿರುವ ಗರ್ಭವು ತುಂಡಾಗಿರುವುದು (ರಪ್ಚರಡ್ ಎಕ್ಟೋಪಿಕ್ ಪತ್ತೆಯಾಗಿತ್ತು.

ತಕ್ಷಣವೇ ಗರ್ಭಿಣಿಯನ್ನು ಪ್ರಸೂತಿ ಐಸಿಯು ವಿಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಅವರ ರಕ್ತ ಪರೀಕ್ಷಿಸಿದಾಗ ಪ್ರಪಂಚದಲ್ಲೇ ಅತಿ ವಿರಳವಾದ, ಅಪರೂಪದ ‘ಬಾಂಬೆ ಬ್ಲಡ್ ಗ್ರೂಪ್’ ಹೊಂದಿರುವುದು ಗೊತ್ತಾಗಿತ್ತು. ಶಸ್ತ್ರ ಚಿಕಿತ್ಸೆ ನಡೆಸಲು 4 ರಿಂದ 5 ಯುನಿಟ್‍ ರಕ್ತದ ಅವಶ್ಯಕತೆಯಿತ್ತು. ಇಲ್ಲವಾದಲ್ಲಿ ಅವರಿಗೆ ತೊಂದರೆಗೆ ಒಳಗಾಗುವ ಸಂದರ್ಭವಿತ್ತು.

ಆ ಸಮಯದಲ್ಲಿ ವೈದ್ಯರುಗಳ ಸಮಯ ಪ್ರಜ್ಞೆಯಿಂದ ಡಾ.ಲೇಪಾಕ್ಷಿ ಬಿ. ಜಿ. ಮತ್ತು ಡಾ.ಅಶ್ವಿನಿ ವೀರೇಶ್ ತಂಡದ ಸತತ ಪ್ರಯತ್ನ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಿದ್ದನಗೌಡ ಪಿ ಇವರ ಮಾರ್ಗದರ್ಶನದಲ್ಲಿ, ಅತೀ ವಿರಳ ರಕ್ತದ ಗುಂಪಿನ ದಾನಿಗಳನ್ನು ಸತತ 6 ಗಂಟೆಗಳ ಪ್ರಯತ್ನದಿಂದ ಹುಡುಕಿ, ರಕ್ತ ಸಂಗ್ರಹಿಸಿ ಗರ್ಭಿಣಿ ಸ್ತ್ರೀಗೆ ನೀಡುವಲ್ಲಿ ರಕ್ತ ನಿಧಿ ಕೇಂದ್ರದ ವೈದ್ಯೆ ಡಾ.ವೀಣಾ ಮತ್ತು ತಂಡವರು ಶ್ರಮಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೊಟ್ಟೂರು, ದಾವಣಗೆರೆ ಜಿಲ್ಲೆಯ ಮಾಯಕೊಂಡದಿಂದ ಇಬ್ಬರು ರಕ್ತದಾನಿಗಳು ಹಾಗೂ ಸಂಕಲ್ಪ ಫೌಂಡೇಷನ್, ಬೆಂಗಳೂರು ಇವರ ಸಹಾಯದಿಂದ ಮತ್ತೊಂದು ಯುನಿಟ್‍ನ್ನು ಬೆಂಗಳೂರು ರಕ್ತನಿಧಿ ಕೇಂದ್ರದಿಮದ ಸಂಗ್ರಹಿಸಿ, ಪರೀಕ್ಷಿಸಿ ಗರ್ಭಿಣಿಗೆ ನೀಡಲಾಗಿದೆ.

ಗರ್ಭಿಣಿಗೆ ತಕ್ಷಣ ಶಸ್ತ್ರಚಿಕಿತ್ಸೆ ಅವಶ್ಯಕತೆ, ಅದರ ಸಾಧಕ ಬಾಧಕಗಳ ಬಗ್ಗೆ ತಿಳಿಸಿ ಶಸ್ತ್ರಚಿಕಿತ್ಸೆಗೆ ಒಪ್ಪಿಸಿ ಅರವಳಿಕೆ ತಜ್ಞ ವೈದ್ಯರಾದ ಡಾ.ಶಿವಾನಂದ ಪಿ.ಟಿ ಮತ್ತು ತಂಡದವರಿಂದ ಸಹಾಯ ಪಡೆದು ಯಶಸ್ವಿ 3 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯೊಳಗೆ ಸಂಗ್ರಹವಾಗಿದ್ದ ಸುಮಾರು 2.5 ಲೀ.ನಷ್ಟು ರಕ್ತವನ್ನು ಹೊರತೆಗೆದು ಗರ್ಭಿಣಿಯನ್ನು ಮೃತ್ಯುಕೂಪದಿಂದ ಹೊರತಂದ ಕೀರ್ತಿ ಎಲ್ಲ ವೈದ್ಯ ತಂಡಕ್ಕೆ ಸಲ್ಲುತ್ತದೆ.

ಈ ಶಸ್ತ್ರಚಿಕಿತ್ಸೆಗೆ ಅತಿ ವಿರಳ ಗುಂಪಿನ ರಕ್ತದಾನವನ್ನು ಮಾಡಿ ಜೀವ ಉಳಿಸಿದ ಮಾಯಕೊಂಡದ ಪ್ರವೀಣ್ ಜಿ, ಕೊಟ್ಟೂರಿನ ಸಿದ್ದೇಶ್, ಸಂಕಲ್ಪ ಫೌಂಡೇಶನ್, ಬೆಂಗಳೂರು ರಕ್ತನಿಧಿ ಕೇಂದ್ರ ಹಾಗೂ ಶಿವಮೊಗ್ಗ ಮೆಗ್ಗಾನ್ ರಕ್ತನಿಧಿ ಕೇಂದ್ರ ಇವರುಗಳಿಗೆ ಸಂಸ್ಥೆ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ವಿರೂಪಾಕ್ಷಪ್ಪ ತಿಳಿಸಿರುತ್ತಾರೆ. ಹಾಗೂ ಅತಿ ವಿರಳ ರಕ್ತದ ಗುಂಪಾದ ಬಾಂಬೆ ಬ್ಲಡ್ ಗ್ರೂಪ್ ಬಗ್ಗೆ ಅರಿವು ಮತ್ತು ಅದರ ದಾನಿಗಳನ್ನು ಪತ್ತೆ ಹಚ್ಚಲು ಸಹಕರಿಸಬೇಕೆಂದು ಕೋರಿದ್ದಾರೆ.

A dog is suspected to have died in a leopard attack near a residential area! : Forest Department team visit ಜನ ವಸತಿ ಪ್ರದೇಶದ ಬಳಿಯೇ ಚಿರತೆ ದಾಳಿಯಿಂದ ನಾಯಿ ಸಾವು ಶಂಕೆ! : ಅರಣ್ಯ ಇಲಾಖೆ ತಂಡ ಭೇಟಿ Previous post ಜನ ವಸತಿ ಪ್ರದೇಶದ ಬಳಿಯೇ ಚಿರತೆ ದಾಳಿಯಿಂದ ನಾಯಿ ಸಾವು ಶಂಕೆ! : ಅರಣ್ಯ ಇಲಾಖೆ  ತಂಡ ಭೇಟಿ
India - Australia World Cup Cricket Match Live Broadcast Viewing System at Nehru Stadium, Shimoga ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಭಾರತ – ಆಸ್ಟ್ರೇಲಿಯಾ ವಿಶ್ವಕಪ್ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ವೀಕ್ಷಣೆ ವ್ಯವಸ್ಥೆ Next post ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಭಾರತ – ಆಸ್ಟ್ರೇಲಿಯಾ ವಿಶ್ವಕಪ್ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ವೀಕ್ಷಣೆ ವ್ಯವಸ್ಥೆ