
ವಿಶ್ವಕಪ್ ಕ್ರಿಕೆಟ್ ಫೈನಲ್ : ಭಾರತಕ್ಕೆ ಸೋಲು – ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್!
ಅಹಮದಬಾದ್, ನ. 19: ವಿಶ್ವಕಪ್ ಕ್ರಿಕೆಟ್ – 2023 ರಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತ ಕ್ರಿಕೆಟ್ ತಂಡ ಫೈನಲ್ ನಲ್ಲಿ ಮುಗ್ಗರಿಸಿದೆ. ಆಸ್ಟ್ರೇಲಿಯಾ ತಂಡ ಜಯಭೇರಿ ಭಾರಿಸಿದ್ದು, ವಿಶ್ವ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತವರಿನಲ್ಲಿಯೇ ಟೀಮ್ ಇಂಡಿಯಾದ ಪರಾಭವವು, ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ.
ಭಾನುವಾರ ಅಹಮದಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಆಸೀಸ್ ಬೌಲರ್ ಗಳ ಶಿಸ್ತುಬದ್ದ ಬೌಲಿಂಗ್ ದಾಳಿ ಎದುರು, ಭಾರತ ಬ್ಯಾಟ್ಸ್ ಮನ್ ಗಳು ರನ್ ಪೇರಿಸಲು ತಿಣುಕಾಡುವಂತಾಯಿತು.
ರೋಹಿತ್ ಶರ್ಮಾ (47 ರನ್), ವಿರಾಟ್ ಕೊಹ್ಲಿ (54), ಕೆ.ಎಲ್.ರಾಹುಲ್ (66) ಹೊರತುಪಡಿಸಿದರೆ ಉಳಿದ ಬ್ಯಾಟ್ಸ್’ಮನ್ ಗಳು ರನ್ ಗಳಿಸಲು ಪರದಾಡಿದರು. 50 ಓವರ್ ಗಳಲ್ಲಿ ಭಾರತವು 240 ರನ್ ಗಳಿಸಲಷ್ಟೆ ಶಕ್ತವಾಯಿತು.
ಈ ಮೊತ್ತ ಬೆನ್ನಟ್ಟಿದ ಆಸೀಸ್ ತಂಡ ಆರಂಭಿಕ ಆಘಾತ ಎದುರಿಸಿತು. ಕೇವಲ 47 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಭಾರತದ ಪಾಳೇಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿತ್ತು.
ಆದರೆ ಟ್ರೆವಿಸ್ ಹೆಡ್ (137) ಹಾಗೂ ಲೇಬಸೆನ್ (58) ಜೋಡಿ 4 ನೇ ವಿಕೆಟ್ ಗೆ ನಡೆಸಿದ 192 ರನ್ ಗಳ ಆಕರ್ಷಕ ಜೊತೆಯಾಟವು, ಭಾರತದ ಗೆಲುವಿನ ಆಸೆ ನುಚ್ಚು ನೂರಾಗುವಂತೆ ಮಾಡಿತು. ಆಸ್ಟ್ರೇಲಿಯಾ ತಂಡವು 6 ನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಂತಾಯಿತು.