Pariwar Community of Old Mysore Part Belonging to Scheduled Tribe: Chief Minister Siddaramaiah's Instruction to Clear Confusion ಪರಿಶಿಷ್ಟ ಪಂಗಡಕ್ಕೆ ಸೇರಿದ ಹಳೆ ಮೈಸೂರು ಭಾಗದ ಪರಿವಾರ ಸಮುದಾಯ : ಗೊಂದಲ ನಿವಾರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಪರಿಶಿಷ್ಟ ಪಂಗಡಕ್ಕೆ ಸೇರಿದ ಹಳೆ ಮೈಸೂರು ಭಾಗದ ಪರಿವಾರ ಸಮುದಾಯ : ಗೊಂದಲ ನಿವಾರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಬೆಂಗಳೂರು, ನ. 22: ಹಳೆ ಮೈಸೂರು ಭಾಗದಲ್ಲಿ ಪರಿವಾರ ಪದವು ನಾಯಕ ಸಮುದಾಯಕ್ಕೆ ಪರ್ಯಾಯವಾಗಿದ್ದು, ಈ ಸಮುದಾಯವನ್ನು ಭಾರತ ಸರ್ಕಾರವು ಪರಿಶಿಷ್ಟ ಪಂಗಡದವರ ಪಟ್ಟಿಗೆ ಸೇರಿಸಿರುವುದರಿಂದ ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಟ್ಟು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿರುವ ಕುರಿತು ಸ್ಪಷ್ಟ ಸುತ್ತೋಲೆ ಹೊರಡಿಸಿ ಗೊಂದಲ ನಿವಾರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ಅವರು ಇಂದು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವ ಕುರಿತು ಇರುವ ಗೊಂದಲ ನಿವಾರಣೆಗೆ ಸಂಬಂಧಿಸಿದಂತೆ ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದ ಸಮುದಾಯದ ಮುಖಂಡರ ನಿಯೋಗ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚಿಸಿದರು.

ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಪರಿವಾರ ಪದವು ನಾಯಕ ಜನಾಂಗಕ್ಕೆ ಪರ್ಯಾಯ ಪದವಾಗಿದೆ. ಈ ಕುರಿತು 1975 ರಲ್ಲಿ ಹಾವನೂರ ವರದಿಯಲ್ಲಿಯೂ ಸ್ಪಷ್ಟಪಡಿಸಲಾಗಿದೆ. 2020 ರಲ್ಲಿ ಭಾರತ ಸರ್ಕಾರವು ಪರಿವಾರ, ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ಈ ಜಾತಿಯ ಹೆಸರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಡದ ಕಾರಣ ಗೊಂದಲ ಸೃಷ್ಟಿಯಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಅನಿಲ್‌ ಚಿಕ್ಕಮಾದು ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಈ ಕುರಿತು ಸ್ಪಷ್ಟ ಸುತ್ತೋಲೆ ಹೊರಡಿಸಿ, ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಗೊಂದಲ ನಿವಾರಿಸುವಂತೆ ಸೂಚಿಸಿದರು. ಈ ಗೊಂದಲದ ಕಾರಣದಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಕುರಿತಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ 58 ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಹಿಂಪಡೆಯುವಂತೆ ನಿಯೋಗದ ಮುಖಂಡರು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ  ಸೂಚಿಸಿದರು.

ನಿಯೋಗದಲ್ಲಿ ಶಾಸಕ ಅನಿಲ್‌ ಚಿಕ್ಕಮಾದು ಅವರ ಜತೆಗೆ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷರಾದ ಎಸ್.ಸಿ.ಬಸವರಾಜು, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಚಿಕ್ಕೀರನಾಯ್ಕ, ದೇವರಾಜ ಕುಮಾರ್, ದೇವಪ್ಪ ನಾಯಕ, ನಾಗರಾಜ ಕ್ಯಾತನಹಳ್ಳಿ, ಗಿನ್ನಳ್ಳಿ ರಾಜಾನಾಯಕ, ಮೈಸೂರು ಪಾಲಿಕೆ ಸದಸ್ಯರಾದ ಲೋಕೇಶ್, ಕೋಟೆ ತಾಲ್ಲೂಕು ನಾಯಕ ಸಮುದಾಯದ ಮುಖಂಡರಾದ ಶಂಭುಲಿಂಗನಾಯಕ್ ಹಾಗೂ  ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ,  ಸಭೆಯಲ್ಲಿ ಭಾಗವಹಿಸಿದ್ದರು.

Destruction of agricultural crops due to the attack of forests: Villagers' anger against the forest department! ಕಾಡಾನೆಗಳ ದಾಳಿಗೆ ಕೃಷಿ ಬೆಳೆ ನಾಶ : ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರ ಆಕ್ರೋಶ! Previous post ಕಾಡಾನೆಗಳ ದಾಳಿಗೆ ಕೃಷಿ ಬೆಳೆ ನಾಶ : ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರ ಆಕ್ರೋಶ!
Request to Indigo to provide flight service from Shimoga to Singapore, Mumbai, Delhi ಶಿವಮೊಗ್ಗದಿಂದ ಸಿಂಗಾಪೂರ, ಮುಂಬೈ, ದೆಹಲಿಗೆ ವಿಮಾನ ಸೇವೆ ಕಲ್ಪಿಸಲು ಇಂಡಿಗೋ ಸಂಸ್ಥೆಗೆ ಮನವಿ Next post ಶಿವಮೊಗ್ಗದಿಂದ ಸಿಂಗಾಪೂರ, ಮುಂಬೈ, ದೆಹಲಿಗೆ ವಿಮಾನ ಸೇವೆ ಕಲ್ಪಿಸಲು ಇಂಡಿಗೋ ಸಂಸ್ಥೆಗೆ ಮನವಿ