
ಶಿವಮೊಗ್ಗದಿಂದ ಸಿಂಗಾಪೂರ, ಮುಂಬೈ, ದೆಹಲಿಗೆ ವಿಮಾನ ಸೇವೆ ಕಲ್ಪಿಸಲು ಇಂಡಿಗೋ ಸಂಸ್ಥೆಗೆ ಮನವಿ
ಶಿವಮೊಗ್ಗ, ನ. 23: ಶಿವಮೊಗ್ಗದಿಂದ ಸಿಂಗಾಪೂರ, ಮುಂಬೈ, ದೆಹಲಿ, ಅಹಮದಬಾದ್, ಡಿಯುದಾಮನ್ ಗಳಿಗೆ ವಿಮಾನ ಸೇವೆ ಕಲ್ಪಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಇಂಡಿಗೋ ಏರ್’ಲೈನ್ಸ್ ಸಂಸ್ಥೆಗೆ ಮನವಿ ಮಾಡಿದೆ.
ಶಿವಮೊಗ್ಗ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಚೇರಿಯಲ್ಲಿ ನ. 22 ರಂದು ಇಂಡಿಗೋ ಸಂಸ್ಥೆಯ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಈ ಮನವಿ ಮಾಡಲಾಗಿದೆ.
ಇಂಡಿಗೋ ವಿಮಾನಗಳ ಪ್ರಯಾಣದಲ್ಲಿ ಕಾರ್ಪೋರೇಟ್ ರಿಯಾಯ್ತಿ ಕಲ್ಪಿಸಬೇಕು. ಕಾಲಮಿತಿಯೊಳಗೆ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ಆರಂಭಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ.
ಇಂಡಿಗೋ ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೇಜರ್ ಮನೋಜ್ ಪ್ರಭು ಅವರು ಮಾತನಾಡಿ, ಇಂಡಿಗೋ ಸಂಸ್ಥೆಯ ವಿಮಾನ ಸೇವೆ ಪ್ರಪಂಚದಾದ್ಯಂತ ಮುಂಚೂಣಿಯಲ್ಲಿದೆ. ಮಾರ್ಚ್ 2024 ರ ನಂತರ ಶಿವಮೊಗ್ಗದಿಂದ ವಿವಿಧ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನಗಳ ಹಾರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಇಂಡಿಗೋ ಸಂಸ್ಥೆಯ ಅಗ್ನೇಲ್ ಪಿಂಟೋ, ಸೌರಭ್ ಸಚಿದೇವ್, ಸಂಘದ ಪ್ರಮುಖರಾದ ಎನ್.ಗೋಪಿನಾಥ್, ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ನಿರ್ದೇಶಕರಾದ ಕೆ.ಎಸ್.ಸುಕುಮಾರ್, ಪರಮೇಶ್ವರ್, ಪ್ರದೀಪ್ ವಿ ಯಲಿ, ಗಣೇಶ್ ಎಂ. ಅಂಗಡಿ,
ಕೈಗಾರಿಕೋದ್ಯಮಿಗಳಾದ ಡಿ.ಎಸ್.ಚಂದ್ರಶೇಖರ್, ಕಿರಣ್ ಕುಮಾರ್, ರವಿ ಪ್ರಕಾಶ್, ಸಂಯೋಜಿತ ಸಂಘಗಳ ಅಧ್ಯಕ್ಷರಾದ ಆರ್.ರಂಗಪ್ಪ, ವಿ.ಕೆ.ಜೈನ್, ರಾಜೇಂದ್ರ ಪ್ರಸಾದ್ ಮೊದಲಾದವರಿದ್ದರು.