
ಕಾಡಾನೆಗಳ ಹಾವಳಿ ನಡುವೆಯೇ ಹುಲಿ ದಾಳಿ : ಭಯಭೀತರಾದ ಗ್ರಾಮಸ್ಥರು!
ಶಿವಮೊಗ್ಗ, ನ. 25: ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಿಗೆರೆ ಗ್ರಾಮಸ್ಥರು, ಕಾಡಾನೆಗಳ ದಾಳಿಯಿಂದ ಹೊಲಗದ್ದೆ – ತೋಟಗಳಲ್ಲಿ ಫಸಲು ಕಳೆದುಕೊಳ್ಳುತ್ತಿದ್ದಾರೆ. ಇದರ ನಡುವೆಯೇ, ಹುಲಿಯೊಂದು ಜಾನುವಾರುಗಳ ಮೇಲೆ ದಾಳಿ ನಡೆಸಲಾರಂಭಿಸಿದೆ. ಇದು ಗ್ರಾಮಸ್ಥರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.
ಕಳೆದ ಕೆಲ ದಿನಗಳಿಂದ ಗ್ರಾಮದ ಸುತ್ತಮುತ್ತ ಹುಲಿಯೊಂದು ಸಂಚರಿಸುತ್ತಿದೆ. ಎಮ್ಮೆ, ಆಕಳುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿ – ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿಯಿತ್ತು ಪರಿಶೀಲಿಸಿದ್ದಾರೆ. ಹುಲಿ ದಾಳಿಯಿಂದ ಬಲಿಯಾದ ಜಾನುವಾರು ಪಾಲಕರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಂದೆಡೆ ಆನೆಗಳ ಹಾವಳಿ ಮತ್ತೊಂದೆಡೆ, ಹುಲಿ ದಾಳಿಯಿಂದ ಗ್ರಾಮಸ್ಥರು ಆತಂಕಿತರಾಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಯು ಗ್ರಾಮದ ಸುತ್ತಮುತ್ತ ಸಂಚರಿಸುತ್ತಿರುವ ಆನೆಗಳು ಹಾಗೂ ಹುಲಿಯನ್ನು ಕಾಡಿಗಟ್ಟುವ ಕಾರ್ಯ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.