
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು : ಬಿ.ಎಸ್.ಯಡಿಯೂರಪ್ಪ ಘೋಷಣೆ
ಶಿವಮೊಗ್ಗ, ಫೆ. 12: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವುದು ಬೇಡ. ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಭಾನುವಾರ ಶಿವಮೊಗ್ಗ ನಗರದ ವಿನೋಬನಗರದಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಬಿ.ಎಸ್.ಯಡಿಯೂರಪ್ಪ ಈ ವಿಷಯ ತಿಳಿಸಿದ್ದಾರೆ.
ಕುವೆಂಪು ಅವರ ಹೆಸರಿಡುವ ಕುರಿತಂತೆ ನಾಳೆ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ತಾವೇ ವಿಷಯ ಪ್ರಸ್ತಾಪ ಮಾಡಲಿದ್ದೆನೆ ಎಂದು ಹೇಳಿದ್ದಾರೆ.
ಕುವೆಂಪು ಅವರು ವಿಶ್ವ ಮಾನವ ಸಂದೇಶ ಸಾರಿದವರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಸಾಹಿತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೆಸರಿಡಬೇಕೆಂಬ ನಿರ್ಧಾರ ಮಾಡಲಾಗಿದೆ. ಅಧಿವೇಶನದಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಮೊದಲಿನಿಂದಲೂ ತಾವು ತಮ್ಮ ಹೆಸರಿಡುವುದು ಬೇಡ ಎಂದು ಸರ್ಕಾರಕ್ಕೆ ತಿಳಿಸುತ್ತಾ ಬಂದಿದ್ದೆನೆ. ಅತ್ಯಂತ ಭವ್ಯವಾಗಿ, ಕಡಿಮೆ ವೆಚ್ಚದಲ್ಲಿ ಹಾಗೂ ಸೀಮಿತಾವಧಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಜೊತೆಗೆ ರಾತ್ರಿ ವೇಳೆಯೂ ವಿಮಾನ ಇಳಿಯುವ ಲೈಂಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅತ್ಯಂತ ಸುಸಜ್ಜಿತವಾಗಿ ವಿಮಾನ ನಿಲ್ದಾಣ ಅಭಿವೃದ್ದಿಪಡಿಸಲಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸಿಎಂ ಘೋಷಣೆ: ಇತ್ತೀಚೆಗಷ್ಟೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿವಮೊಗ್ಗ ನಗರದಲ್ಲಿ ನಡೆದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ, ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರಿಡುವ ನಿರ್ಧಾರ ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದರು.
ಈ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಇಷ್ಟರಲ್ಲಿಯೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡಲಾಗುವುದು ಎಂದು ಸಿಎಂ ತಿಳಿಸಿದ್ದರು.