
ಪೂಜೆಗಿಟ್ಟಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನೇ ನುಂಗಿದ ಹಸು..!
ಶಿವಮೊಗ್ಗ, ನ. 28: ಆಕಸ್ಮಿಕವಾಗಿ ಹಸುವೊಂದರ ಹೊಟ್ಟೆ ಸೇರಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನು, ಪಶುವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮತ್ತಿಮನೆ ಗ್ರಾಮದಲ್ಲಿ ನಡೆದಿದೆ.
ಶ್ಯಾಮ ಉಡುಪ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ದೀಪಾವಳಿ ಗೋಪೂಜೆ ಮಾಡುವ ವೇಳೆ ಮನೆಯವರು ಕಳಸಕ್ಕೆ ಚಿನ್ನದ ಸರವನ್ನಿಟ್ಟು ಪೂಜಿಸಿದ್ದರು. ಈ ವೇಳೆ ಪೂಜೆಗಿಟ್ಟಿದ್ದ ಪ್ರಸಾದದ ಜೊತೆಗೆ ಆಕಸ್ಮಿಕವಾಗಿ ಬಂಗಾರದ ಸರವನ್ನು ಕೂಡ ಹಸು ನುಂಗಿದೆ. ಇದು ಮನೆಯವರ ಗಮನಕ್ಕೆ ಬಂದಿರಲಿಲ್ಲ.
ಚಿನ್ನದ ಸರಕ್ಕಾಗಿ ಕುಟುಂಬದವರು ಎಲ್ಲೆಡೆ ಹುಡುಕಾಡಿದ್ದರೂ ಪತ್ತೆಯಾಗಿರಲಿಲ್ಲ. ತದನಂತರ ಬಂಗಾರದ ಸರ ಹಸುವಿನ ಹೊಟ್ಟೆ ಸೇರಿರುವ ಶಂಕೆ ವ್ಯಕ್ತಪಡಿಸಿದ್ದರು. ಈ ನಡುವೆ ಏಕಾಏಕಿ ಹಸುವು ಹುಲ್ಲು ತಿನ್ನುವುದನ್ನು ಕಡಿಮೆ ಮಾಡಿತ್ತು. ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲಿ ಕುಟುಂಬದವರು ಪಶು ವೈದ್ಯರಿಗೆ ಮಾಹಿತಿ ನೀಡಿದ್ದು, ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿ ಡಾ.ಆನಂದ್ ಅವರು ಸ್ಥಳಕ್ಕಾಗಮಿಸಿ ಹಸುವನ್ನು ಪರಿಶೀಲಿಸಿದ್ದರು.
ಕಳೆದ ಭಾನುವಾರ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯಲ್ಲಿದ್ದ ಚಿನ್ನದ ಸರ ಹೊರತೆಗೆದಿದ್ದಾರೆ. ಸದ್ಯ ಹಸುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಯಾವುದೇ ತೊಂದರೆಯಿಲ್ಲವಾಗಿದೆ ಎಂದು ಡಾ.ಆನಂದ್ ಅವರು ಮಾಹಿತಿ ನೀಡಿದ್ದಾರೆ.
ಪಶುಪಾಲಕರಿಗೆ ವೈದ್ಯರ ಸಲಹೆಯೇನು?
*** ‘ಲೋಹದ ವಸ್ತುಗಳು ಜಾನುವಾರುಗಳ ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ಕಾರಣಕ್ಕೂ ಲೋಹದ ವಸ್ತುಗಳನ್ನು ಜಾನುವಾರುಗಳು ಸೇವಿಸದಂತೆ ಸೂಕ್ತ ಮುನ್ನೆಚ್ಚರಿಕೆಯನ್ನು ಪಶುಪಾಲಕರು ವಹಿಸಬೇಕು’ ಎಂದು ಹಿರಿಯ ಪಶು ವೈದ್ಯಾಧಿಕಾರಿ ಡಾ.ಆನಂದ್ ಅವರು ಸಲಹೆ ನೀಡಿದ್ದಾರೆ.