
ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ!
ಶಿವಮೊಗ್ಗ, ಡಿ. 3: ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ ಬರ್ಬರ ಘಟನೆ ಶಿವಮೊಗ್ಗ ತಾಲೂಕಿನ ಬೆಳಲಕಟ್ಟೆ – ಅಬ್ಬಲಗೆರೆ ರಸ್ತೆ ನಡುವಿನ ತುಂಗಾ ಮೇಲ್ದಂಡೆ ಚಾನಲ್ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.
ಬೆಳಲಕಟ್ಟೆ ಗ್ರಾಮದ ನಿವಾಸಿ ಮಹೇಶಪ್ಪ (60) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೈಗೆ ಬೆಂಕಿ ಹೊತ್ತಿಕೊಂಡು ತೀವ್ರ ಸ್ವರೂಪದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಹೇಶ್ವರಪ್ಪರನ್ನು ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂತರ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಮಹೇಶ್ವರಪ್ಪ ಅವರು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿ ನಿಲ್ಲಿಸಿ, ಮೈಮೇಲೆ ಪೆಟ್ರೋಲ್ ಎರಚಿ ಮೊದಲೇ ಸಿದ್ದಪಡಿಸಿಟ್ಟುಕೊಂಡಿದ್ದ ದೊಂದಿ ಕೋಲಿನಿಂದ ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.
ಮಹೇಶ್ವರಪ್ಪರವರು ಘಟನಾ ಸ್ಥಳದಲ್ಲಿ ತಮ್ಮ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದವರ ಹೆಸರನ್ನು ಹೇಳಿದ್ದು, ಅದನ್ನು ಕೆಲ ನಾಗರೀಕರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಮೀನು ವಿವಾದದ ಹಿನ್ನೆಲೆಯಲ್ಲಿ, ಮಹೇಶ್ವರಪ್ಪ ಮನೆ ಸಮೀಪದಲ್ಲಿಯೇ ವಾಸವಿದ್ದ ಅವರ ಸಂಬಂಧಿ ವ್ಯಕ್ತಿ ಹಾಗೂ ಆತನ ಪುತ್ರ ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.