
ನಗರ – ಪಟ್ಟಣ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ನೆನೆಗುದಿಗೆ : ಶಾಸಕ ಡಿ.ಎಸ್.ಅರುಣ್ ತೀವ್ರ ಅಸಮಾಧಾನ!
ಬೆಳಗಾವಿ / ಶಿವಮೊಗ್ಗ, ಡಿ. 5: ಅವಧಿ ಪೂರ್ಣಗೊಂಡಿರುವ ನಗರ-ಪಟ್ಟಣ ಸ್ಥಳೀಯ ಸಂಸ್ಥೆ (ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ) ಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ, ಕಾಲಮಿತಿಯೊಳಗೆ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸುವಂತೆ, ಶಿವಮೊಗ್ಗ ಕ್ಷೇತ್ರದ ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧ ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ, ಪೌರಾಡಳಿತ ಸಚಿವ ರಹೀಂಖಾನ್ ಹಾಗೂ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರನ್ನು ಡಿ.ಎಸ್.ಅರುಣ್ ನೇತೃತ್ವದ ವಿಪ ಶಾಸಕರ ತಂಡ ಪ್ರತ್ಯೇಕವಾಗಿ ಭೇಟಿಯಾಗಿ ಮನವಿ ಪತ್ರ ಅರ್ಪಿಸಿದೆ.
ಸ್ಥಳೀಯ ಸಂಸ್ಥೆಗಳ ಮೊದಲ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಡಳಿತ ಅವಧಿ ಪೂರ್ಣಗೊಂಡು ಹಲವು ತಿಂಗಳುಗಳಾಗಿವೆ. ಆದರೆ ಇಲ್ಲಿಯವರೆಗೂ ಎರಡನೇ ಹಂತದ ಅಧ್ಯಕ್ಷ – ಉಪಾಧ‍್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಗೊಳಿಸಿಲ್ಲ. ಇದರಿಂದ ಚುನಾಯಿತ ಪ್ರತಿನಿಧಿಗಳ ಹಕ್ಕು ಮೊಟಕುಗೊಳಿಸಿದಂತಾಗಿದೆ ಎಂದು ದೂರಿದ್ದಾರೆ.
ಸ್ಥಳೀಯ ಸಂಸ್ಥೆಗಳ ಆಡಳಿತದ ಮೀಸಲು ವಿಳಂಬದಿಂದ, ಅವಧಿ ಮುಗಿದು ವರ್ಷಗಳಾದರೂ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆದಿಲ್ಲಲ್ಲವಾಗಿದೆ ಎಂದು ಇದೇ ವೇಳೆ ಡಿ.ಎಸ್.ಅರುಣ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಕಾಲಮಿಯೊಳಗೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿ ಚುನಾವಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಶಾಸಕರಾದ ಸುಜಾ ಕುಶಾಲಪ್ಪ, ಕೆ.ಎಸ್ ನವೀನ್, ಪಿ.ಹೆಚ್.ಪೂಜಾರ್, ಪ್ರದೀಪ್ ಶೆಟ್ಟರ್ ಮೊದಲಾದವರಿದ್ದರು.