
ವಿದ್ಯಾರ್ಥಿನಿಯ ಸಾವು – ಕಾಲೇಜ್ ವಿರುದ್ದ ಪೋಷಕರ ತೀವ್ರ ಆಕ್ರೋಶ : ಸ್ಥಳಕ್ಕೆ ಎಸ್ಪಿ ಭೇಟಿ
ಶಿವಮೊಗ್ಗ, ಡಿ. 5: ವಿದ್ಯಾರ್ಥಿನಿಯೋರ್ವಳು ಕಾಲೇಜ್ ಕಟ್ಟಡದಿಂದ ಬಿದ್ದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಶಿವಮೊಗ್ಗ ನಗರದಲ್ಲಿ ಮಂಗಳವಾರ ನಡೆದಿದೆ.
ಕುವೆಂಪು ರಸ್ತೆಯಲ್ಲಿರುವ ಆದಿಚುಂಚನಗಿರಿ ಪಿಯು ಕಾಲೇಜ್ ನ ವಿದ್ಯಾರ್ಥಿನಿ ಮೇಘಶ್ರೀ (17) ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಮೂಲತಃ ವಿದ್ಯಾರ್ಥಿನಿಯು ಚನ್ನಗಿರಿ ತಾಲೂಕು ಸಂತೆಬೆನ್ನೂರು ಮೂಲದವರಾಗಿದ್ಧಾರೆ.
ಬೆಳಿಗ್ಗೆ ಕಾಲೇಜ್ ನಲ್ಲಿ ಪರೀಕ್ಷೆಗೆ ಹಾಜರಾದ ವೇಳೆ ಘಟನೆ ನಡೆದಿದೆ. ಆದರೆ ವಿದ್ಯಾರ್ಥಿನಿಯು ಕಾಲೇಜು ಕಟ್ಟಡದಿಂದ ಬಿದ್ದಿದ್ದು ಹೇಗೆ? ಆಕಸ್ಮಿಕವೋ? ಆತ್ಮಹತ್ಯೆಯೋ? ಎಂಬಿತ್ಯಾದಿ ವಿವರಗಳು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ.
ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕಾಲೇಜ್ ನವರು ದಾಖಲಿಸಿದ್ದಾರೆ. ಆದರೆ ಮೇಘಶ್ರೀ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.
ಆಕ್ರೋಶ: ಮತ್ತೊಂದೆಡೆ, ಮೃತ ವಿದ್ಯಾರ್ಥಿನಿಯ ಪೋಷಕರು ಹಾಗೂ ಸಂಬಂಧಿಕರು ಆದಿಚುಂಚನಗಿರಿ ಶಾಲೆ ಆವರಣದಲ್ಲಿ ಜಮಾಯಿಸಿ ಕಾಲೇಜ್ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಮೇಘಶ್ರೀ ಸಾವು ಅನುಮಾನಾಸ್ಪದವಾಗಿದೆ. ವಿದ್ಯಾರ್ಥಿನಿಯ ಸಾವಿನ ಕುರಿತಂತೆ ಸ್ಪಷ್ಟ ಕಾರಣ ತಿಳಿಸಬೇಕು. ಕಾಲೇಜ್ ಕಟ್ಟಡದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಒದಗಿಸಬೇಕು. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಭೇಟಿ ನೀಡಿ, ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.