
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ, ಡಿ. 6: ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಬೇಕೆಂದು, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.
ಈ ಸಂಬಂಧ ಬುಧವಾರ ಶಿವಮೊಗ್ಗದ ಮುಖ್ಯ ಅಂಚೆ ಕಚೇರಿ ಎದುರು ಸಂಘಟನೆ ಪ್ರತಿಭಟನೆ ನಡೆಸಿತು. ನಂತರ ಸ್ಥಳೀಯ ಅಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಅರ್ಪಿಸಿತು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಪರಿಶ್ರಮದಿಂದ ಸುಸಜ್ಜಿತ ವಿಮಾನ ನಿಲ್ದಾಣ ಅಭಿವೃದ್ದಿಯಾಗಿದೆ. ಸದರಿ ವಿಮಾನ ನಿಲ್ದಾಣಕ್ಕೆ ಜಿಲ್ಲೆಯವರೇ ಆದ ಮೇರು ಸಾಹಿತಿ ಕುವೆಂಪು ಅವರ ಹೆಸರು ಸೂಕ್ತವಾಗಿದೆ ಎಂದು ಸಂಘಟನೆ ತಿಳಿಸಿದೆ.
ತಕ್ಷಣವೇ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ನಾಮಕರಣಗೊಳಿಸಿ ಆದೇಶ ಹೊರಡಿಸಬೇಕು ಎಂದು ಸಂಘಟನೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಎಸ್.ವಿ.ರಾಜಮ್ಮ, ಡಾ.ಶೇಖರ್ ಗೌಳೇರ್, ಮಂಜುನಾಥ್ ಪಟೇಲ್, ಮಂಜುನಾಥ್, ಎಲ್. ಆದಿಶೇಷ, ಶಿವಣ್ಣ, ಡಾ.ನೇತ್ರಾವತಿ, ಜಿ.ವಿ.ಮಂಜುಳಾ, ಸುವರ್ಣ ನಾಗರಾಜ್, ರೇಷ್ಮಾ, ಟಿ.ಬಿ.ಸೋಮಶೇಖರಯ್ಯ, ಗೋಪಾಲಕೃಷ್ಣ ಶ್ರಂಕ್ರನಾಯ್ಕ್, ಗೋವಿಂದಸ್ವಾಮಿ, ಪ್ರದೀಪ್ ಮೊದಲಾದವರಿದ್ದರು.