
ಭಾರೀ ಗಾತ್ರದ ಹೆಬ್ಬಾವು ಸಂರಕ್ಷಣೆ..!
ನ್ಯಾಮತಿ, ಡಿ. 13: ಬೃಹದಾಕಾರದ ಹೆಬ್ಬಾವೊಂದನ್ನು, ಶಿವಮೊಗ್ಗದ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ.
ದೊಡ್ಡೇರಿ ಗ್ರಾಮದ ರಸ್ತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ಗ್ರಾಮಸ್ಥರು ನೀಡಿದ ಮಾಹಿತಿ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಹಾವನ್ನು ಹಿಡಿದಿದ್ದಾರೆ.
‘ಸದರಿ ಹಾವು ಸುಮಾರು ಎಂಟೂವರೆ ಅಡಿ ಉದ್ದವಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಹರಮಘಟ್ಟ ಅರಣ್ಯದಲ್ಲಿ ಬಿಡಲಾಯಿತು’ ಎಂದು ಸ್ನೇಕ್ ಕಿರಣ್ ಮಾಹಿತಿ ನೀಡಿದ್ದಾರೆ.
‘ಹೆಬ್ಬಾವು ಸಾಕಷ್ಟು ಬಲಶಾಲಿ ಹಾವಾಗಿದೆ. ಇದನ್ನು ಹಿಡಿಯುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಅದಕ್ಕೆ ತೊಂದರೆಯುಂಟಾಗುವ ರೀತಿಯಲ್ಲಿ ನಾಗರೀಕರು ಹಿಡಿಯಲು ಯತ್ನಿಸಬಾರದು’ ಎಂದು ಕಿರಣ್ ಅವರು ಮನವಿ ಮಾಡಿಕೊಂಡಿದ್ದಾರೆ.