
ಭಾರೀ ಭದ್ರತಾ ವೈಫಲ್ಯ : ಲೋಕಸಭೆಗೆ ನುಗ್ಗಿದ ಇಬ್ಬರು ಯುವಕರನ್ನು ಸಂಸದರೇ ಹಿಡಿದುಕೊಟ್ಟರು!
ನವದೆಹಲಿ, ಡಿ. 13: ಸಂಸತ್ ಭವನದಲ್ಲಿ ಭಾರೀ ಭದ್ರತಾ ವೈಫಲ್ಯದ ಘಟನೆ ನಡೆದಿದ್ದು, ಲೋಕಸಭೆ ಕಲಾಪಕ್ಕೆ ನುಗ್ಗಿದ ಇಬ್ಬರು ಅಪರಿಚಿತರು ಕಲರ್ ಸ್ಮೋಕ್ (ಬಣ್ಣದ ಹೊಗೆ) ಸಿಡಿಸಿ, ಘೋಷಣೆಗಳನ್ನು ಕೂಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮಧ್ಯಾಹ್ನ 1 ಗಂಟೆ ಅವಧಿಯಲ್ಲಿ, ಲೋಕಸಭೆಯ ಶೂನ್ಯ ಕಲಾಪದ ವೇಳೆ ಈ ಘಟನೆ ನಡೆದಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಪರಿಚಿತ ಯುವಕರು ಅಲ್ಲಿಂದ ಕಲಾಪ ಸ್ಥಳಕ್ಕೆ ಹಾರಿದ್ದಾರೆ. ನಂತರ ಕಲರ್ ಸ್ಮೋಕ್ ಸಿಡಿಸುತ್ತಾ ಸಾಗಿದ್ದಾರೆ. ತಕ್ಷಣವೇ ಯುವಕರನ್ನು ಕೆಲ ಸಂಸದರೇ ಹಿಡಿದಿದ್ದಾರೆ. ನಂತರ ಭದ್ರತಾ ಸಿಬ್ಬಂದಿಗಳ ವಶಕ್ಕೆ ಒಪ್ಪಿಸಿರುವ ಮಾಹಿತಿಗಳು ಬಂದಿವೆ.
ದಿಢೀರ್ ಘಟನೆಯಿಂದ ಲೋಕಸಭೆ ಕಲಾಪದಲ್ಲಿ ಕೆಲ ಸಮಯ ಆತಂಕ, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ನಂತರ ಕಲಾಪವನ್ನು ಮುಂದೂಡಲಾಗಿದೆ.
ಸದರಿ ಅಪರಿಚಿತರು ಕರ್ನಾಟಕ ರಾಜ್ಯದ ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದರು ಎಂದು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರು ಹೇಳಿದ್ದಾರೆ.
ಮತ್ತಿಬ್ಬರು ವಶಕ್ಕೆ : ಈ ಘಟನೆಯ ನಡುವೆಯೇ ಸಂಸತ್ ಭವನದ ಹೊರಭಾಗದಲ್ಲಿಯೂ ಓರ್ವ ಯುವಕ ಹಾಗೂ ಯುವತಿ ಕಲರ್ ಸ್ಮೋಕ್ ಸಿಡಿಸಿ ಘೋಷಣೆ ಕೂಗಿದ ಘಟನೆ ಕೂಡ ನಡೆದಿದೆ. ಇವರನ್ನು ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ವರ್ಷಾಚರಣೆಯ ದಿನ : ೨೨ ವರ್ಷಗಳ ಹಿಂದೆ ಸಂಸತ್ ಭವನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಇಂದು ಇದರ ೨೨ ನೇ ವರ್ಷಾಚರಣೆ ನಡೆಸಲಾಗುತ್ತಿದೆ. ಸಂಸತ್ ಕಲಾಪದ ವೇಳೆ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಲಾಗಿತ್ತು.
ಭದ್ರತೆ : ಸಂಸತ್ ಭವನದಲ್ಲಿ ಮೂರು ಹಂತದ ಭದ್ರತಾ ತಪಾಸಣೆ ಇರುತ್ತದೆ. ಸಾಕಷ್ಟು ಕಟ್ಟೆಚ್ಚರವಹಿಸಲಾಗಿರುತ್ತದೆ. ಸಂಸದರಿಗೆ ಮೊಬೈಲ್ ಪೋನ್ ಕೊಂಡೊಯ್ಯಲು ಕೂಡ ಅವಕಾಶವಿರುವುದಿಲ್ಲ. ಹೀಗಿರುವಾಗ ಅಪರಿಚಿತರು ಕಲರ್ ಸ್ಮೋಕ್ ಕಡ್ಡಿಯನ್ನು ಕೊಂಡೊಯ್ದಿದ್ದು ಹೇಗೆ? ಹೊತ್ತಿಸಿದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ.