
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು : ವಿಧಾನ ಮಂಡಲದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ
ಬೆಳಗಾವಿ / ಶಿವಮೊಗ್ಗ, ಡಿ. 15: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಲು, ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.
ವಿಧಾನಸಭೆಯಲ್ಲಿ ಗುರುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು, ಹುಬ್ಬಳ್ಳಿ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ – ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವಣ್ಣ ಹೆಸರಿಡುವ ನಿರ್ಣಯವನ್ನು ಮಂಡಿಸಿದರು.
ಅದೇ ರೀತಿ ವಿಧಾನ ಪರಿಷತ್ ನಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಅವರು ನಿರ್ಣಯವನ್ನು ಮಂಡಿಸಿದರು. ಎರಡು ಸದನಗಳಲ್ಲಿ ಸರ್ಕಾರದ ಪ್ರಸ್ತಾಪಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಯಿತು. ಆಡಳಿತ – ಪ್ರತಿಪಕ್ಷದ ಸದಸ್ಯರು ಸ್ವಾಗತಿಸಿದರು. ಬಳಿಕ ಎರಡು ಸದನಗಳಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ವಿಧಾನ ಮಂಡಲದಲ್ಲಿ ಅಂಗೀಕರಿಸಿದ ನಿರ್ಣಯವನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡಲಿದೆ. ನಂತರ ಕೇಂದ್ರ ಸರ್ಕಾರ ಅದಿಕೃತ ಆದೇಶ ಹೊರಡಿಸಲಿದೆ.
ವಿಳಂಬ: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರಿಡಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಸ್ವತಃ ಬಿ.ಎಸ್.ಯಡಿಯೂರಪ್ಪ ಅಸಮ್ಮತಿ ವ್ಯಕ್ತಪಡಿಸಿ, ತಮ್ಮ ಹೆಸರಿಗೆ ಬದಲಾಗಿ ಶಿವಮೊಗ್ಗ ಜಿಲ್ಲೆಯವರೇ ಆದ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವಂತೆ ಸರ್ಕಾರಕ್ಕೆ ಪತ್ರ ಬರೆದು ಸಲಹೆ ನೀಡಿದ್ದರು. ಇದಕ್ಕೆ ಸರ್ಕಾರ ಕೂಡ ಸಮ್ಮತಿಸಿತ್ತು.
ಆದರೆ ನಾಮಕರಣ ಪ್ರಕ್ರಿಯೆ ವಿಳಂಬವಾಗಿತ್ತು. ಸದ್ಯ ವಿಮಾನ ಪ್ರಯಾಣದ ಟಿಕೆಟ್ ನಲ್ಲಿ ಶಿವಮೊಗ್ಗ ಏರ್ ಪೋರ್ಟ್ ಎಂದೇ ಮುದ್ರಿತವಾಗುತ್ತಿದೆ. ಏರ್ ಪೋರ್ಟ್ ಗೆ ಕುವೆಂಪು ಹೆಸರಿಡಲು ಕ್ರಮಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿದ್ದವು.