
ಶಿವಮೊಗ್ಗದಲ್ಲಿ ಆರಂಭವಾಗಲಿದೆ ಮಧ್ಯ ಕರ್ನಾಟಕದ ಮೊಟ್ಟಮೊದಲ ‘ತಾಯಂದಿರ ಎದೆಹಾಲು ಬ್ಯಾಂಕ್’
ಶಿವಮೊಗ್ಗ, ಡಿ. 18: ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ, ಇಲ್ಲಿನ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಡಿಸೆಂಬರ್ 20 ರಂದು ಬೆಳಗ್ಗೆ 11 ಗಂಟೆಗೆ ಅಮೃತ ಬಿಂದು ಹೆಸರಿನಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್‌ನ್ನು ಕೋಡಿಮಠದ ಡಾ. ಶಿವಾನಂದ ರಾಜೇಂದ್ರ ಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ ಎಂದು ಸರ್ಜಿ ಆಸ್ಪತ್ರೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಎದೆಹಾಲಿನ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚು ಅರಿವು ಮೂಡಿಸುವಲ್ಲಿ ವಿಶೇಷ ಕಾಳಜಿ ಹೊಂದಿರುವಂತಹ ಬೆಂಗಳೂರು ದಯಾನಂದ ಸಾಗರ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಆಶಾ ಬೆನಕಪ್ಪ ಆಗಮಿಸುವರು.
ಶಿವಮೊಗ್ಗದ ಖ್ಯಾತ ವೈದ್ಯರಾದ ಡಾ.ಪಿ.ನಾರಾಯಣ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಜೀ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ ಹಾಗೂ ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್., ಉಪಸ್ಥಿತರಿರುವರು ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷರಾದ ರೊ.ಎಚ್.ಪಿ.ಶಿವರಾಜ್ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದ್ದಾರೆ.
ಗೋಷ್ಟಿಯಲ್ಲಿ ಶಿವಮೊಗ್ಗದ ಖ್ಯಾತ ವೈದ್ಯರಾದ ಡಾ.ಪಿ.ನಾರಾಯಣ್, ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ , ರೋಟರಿ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷರಾದ ರೊ.ಎಚ್.ಪಿ.ಶಿವರಾಜ್, ರೊ.ಜೆ.ಪಿ.ಚಂದ್ರು, ರೊ. ಕಿರಣ್ ಕುಮಾರ್, ರೋ.ಬಸವರಾಜ್, ಜೋನಲ್ ಲೆಫ್‌್ಟ ನೆಂಟ್ ರೋ.ಧರ್ಮೇಂದ್ರ ಸಿಂಗ್, ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ, ಸರ್ಜಿ ಆಸ್ಪತ್ರೆ ಮೆಡಿಕಲ್ ಸೂಪರಿಂಟ್‌ಡೆಂಟ್ ಡಾ.ಪ್ರಶಾಂತ್ ಎಸ್.ವಿ., ಉಪಸ್ಥಿತರಿದ್ದರು.
ಹಾಲುಣಿಸುವಿಕೆ ಮಹತ್ವ: ಹುಟ್ಟಿದ ನಂತರ ಮಗುವಿಗೆ ತಾಯಿ ಕೊಡಬಹುದಾದ ಬಹುದೊಡ್ಡ ಉಡುಗೊರೆಯೆಂದರೆ ಎದೆಹಾಲು ಉಣಿಸುವುದು. ಭಗವಂತನ ಸೃಷ್ಟಿಯ ಪ್ರಪಂಚದಲ್ಲಿ ಹುಟ್ಟಿದ ಮಗುವಿಗೆ ಸಂಪೂರ್ಣ ಪೌಷ್ಟಿಕ ಆಹಾರ ಮತ್ತು ರೋಗ ನಿರೋಧಕ ಶಕ್ತಿ ನೀಡುವ ಆಹಾರವೇ ಎದೆಹಾಲು.
ಇದನ್ನು ಅರಿತೇ ನಮ್ಮ ಪೂರ್ವಜರು ಎದೆಹಾಲು ಅಮೃತಕ್ಕೆ ಸಮಾನ ಎಂದು ಹೇಳಿರಬಹುದು. ಇಂತಹ ಎದೆಹಾಲನ್ನು ಶಿಶುವಿಗೆ ಉಣಿಸುವುದು ಎಲ್ಲರ ತಾಯಂದಿರ ಕರ್ತವ್ಯ, ಮಕ್ಕಳ ಹಕ್ಕು ಕೂಡ. ಒಂದು ಮಗುವಿನ ಬೆಳವಣಿಯಲ್ಲಿ ಅತಿ ಮುಖ್ಯವಾಗಿರುವ ಈ ಪ್ರಕ್ರಿಯೆಯ ಪ್ರಾಮುಖ್ಯತೆ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ.
ಒಂದು ಅಂಕಿ ಅಂಶದ ಪ್ರಕಾರ ಶೇ.46 ರಷ್ಟು ನವಜಾತ ಶಿಶುಗಳಿಗೆ ಸಮರ್ಪಕವಾಗಿ ಸ್ತನ್ಯಪಾನವಾಗುತ್ತಿಲ್ಲ ಎಂದು ತಿಳಿದು ಬರುತ್ತಿದೆ. ಇದರ ಪರಿಣಾಮ ಮಕ್ಕಳಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಅಥವಾ ಮೆದುಳಿನ ಬೆಳವಣಿಗೆ ಆಗಿರಬಹುದು, ಇವೆಲ್ಲದರ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಇದರ ಪ್ರಾಮುಖ್ಯತೆ ಅರಿತೇ ಎಲ್ಲ ನವಜಾತ ಶಿಶುಗಳಿಗೂ ತಾಯಂದಿರ ಎದೆಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಎದೆಹಾಲಿನ ಬ್ಯಾಂಕ್‌ನ್ನು ಪ್ರಪಂಚಾದ್ಯಂತ ಸ್ಥಾಪನೆ ಮಾಡಲಾಗಿದೆ. ಇದರ ನೇರ ಪ್ರಯೋಜನ ಅಗತ್ಯ ಪ್ರಮಾಣದಲ್ಲಿ ಎದೆಹಾಲು ಉತ್ಪತ್ತಿ ಮಾಡಲಾಗದ ತಾಯಿ ಹಾಗೂ ಎದೆಹಾಲು ವಂಚಿತವಾದ ಶಿಶುಗಳಿಗಾಗಿ ದಾನ ಮಾಡಿದ ಎದೆಹಾಲನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಅಗತ್ಯ ಇರುವ ನವಜಾತ ಶಿಶುಗಳಿಗೆ ಪೂರೈಸುವ ಸಲುವಾಗಿ ಮಿಲ್ಕ್ ಬ್ಯಾಂಕ್‌ನ್ನು ಸ್ಥಾಪಿಸಲಾಗುತ್ತಿದೆ.
1909 ರಲ್ಲಿ ಮೊಟ್ಟ ಮೊದಲನೇ ತಾಯಿ ಎದೆಹಾಲಿನ ಬ್ಯಾಂಕ್ ಆರಂಭಗೊಂಡಿತು, 1989 ರಲ್ಲಿ ಏಷ್ಯಾದಲ್ಲಿ ಪ್ರಥಮ ಮಿಲ್ಕ್ ಬ್ಯಾಂಕ್ ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ಸ್ಥಾಪನೆಗೊಂಡಿತು, 2020 ರವರೆಗೆ ವಿಶ್ವದ 66 ದೇಶಗಳಲ್ಲಿ 756 ಎದೆಹಾಲು ಸಂಗ್ರಹಣಾ ಬ್ಯಾಂಕ್ ಸ್ಥಾಪನೆಗೊಂಡಿದ್ದು, ಈ ಪೈಕಿ ಬ್ರೆಜಿಲ್‌ನಲ್ಲಿ 256 ಬ್ಯಾಂಕ್‌ಗಳಿವೆ. ಸಮೀಕ್ಷೆಯ ಪ್ರಕಾರ 2022 ರವರೆಗೆ ಭಾರತದಲ್ಲಿ 90 ಎದೆಹಾಲು ಬ್ಯಾಂಕ್‌ಗಳು ಸ್ಥಾಪನೆಗೊಂಡಿವೆ.
ಮಧ್ಯ ಕರ್ನಾಟಕದಲ್ಲಿ ಬೆಂಗಳೂರಲ್ಲಿ ಇಂತಹ ಮಿಲ್ಕ್ ಬ್ಯಾಂಕ್ ಸ್ಥಾಪನೆ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಬೆಳಗಾವಿ, ಮಂಗಳೂರು,ಧಾರವಾಡದಂತಹ ನಗರದಲ್ಲಿ ತಾಯಂದಿರ ಎದೆಹಾಲಿನ ಸ್ಥಾಪನೆಗೊಂಡಿವೆ. ಕರ್ನಾಟಕದ ಮಧ್ಯ ಭಾಗದ ಬಯಲುಸೀಮೆ ಮತ್ತು ಮಲೆನಾಡ ಹೆಬ್ಬಾಗಿಲಾಗಿರುವ ಶಿವಮೊಗ್ಗದಂತಹ ಪ್ರಮುಖ ಸ್ಥಳದಲ್ಲಿ ಬ್ಯಾಂಕ್ ಕೊರತೆ ಕಾಡುತ್ತಿತ್ತು.
ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣೆಗೆರೆ,ಬಳ್ಳಾರಿ, ಹಾವೇರಿ,ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎದೆ ಹಾಲಿನ ಬ್ಯಾಂಕ್ ಇರುವುದಿಲ್ಲ, ಈ ಕೊರತೆಯನ್ನು ನೀಗಿಸಲು ಹಾಗೂ ನವಜಾತ ಶಿಶುಗಳಿಗೆ ಪ್ರಯೋಜನವಾಗಲೆಂದೇ ರೋಟರಿ ಗ್ಲೋಬಲ್ ಗ್ರ್ಯಾಂಟ್ ಹಾಗೂ ಸರ್ಜಿ ಆಸ್ಪತ್ರೆ ನೆರವಿನೊಂದಿಗೆ ತಾಯಂದಿರ ಎದೆಹಾಲಿನ ಮಿಲ್ಕ್ ಬ್ಯಾಂಕ್‌ನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.
ಎದೆಹಾಲು ದಾನದಿಂದ ತಾಯಿಗಾಗುವ ಲಾಭಗಳು:
*ತಮ್ಮ ಜೀವ ರಕ್ಷಣೆಗಾಗಿ ಮತ್ತು ದುರ್ಬಲವಾಗಿರುವ ಶಿಶುಗಳ ಆರೋಗ್ಯ ಸುಧಾರಣೆಗೆ ನೆರವಾಗುತ್ತಿದ್ದಾರೆಂಬ ಸಂತೃಪ್ತಿ ಮತ್ತು ಸಂತೋಷದ ಮನೋಭಾವ ತಾಯಂದಿರಲ್ಲಿ ಒಡಮೂಡುತ್ತದೆ.
*ತಾಯಂದಿರು ಎದೆ ಹಾಲನ್ನು ನಿಯಮಿತವಾಗಿ ನೀಡುವುದರಿಂದ ಹೆರಿಗೆ ನಂತರದ ಖಿನ್ನತೆ, ಸ್ತನ ಕ್ಯಾನರಸರ್, ಅಂಡಾಶಯದ ಕ್ಯಾನರಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.
*ಯಾವುದಾದರೂ ಕಾರಣಗಳಿಂದ ಶಿಶುಗಳು ಬೇರ್ಪಟ್ಟಿದ್ದರೆ ಎದೆಹಾಲನ್ನು ದಾನ ಮಾಡುವುದರಿಂದ ತಾಯಂದಿರು ತಮ್ಮ ಎದೆಹಾಲಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬಹುದು.
*ಶಿಶುಗಳನ್ನು ಕಳೆದುಕೊಂಡಿರುವ ತಾಯಂದಿರು ಎದೆಹಾಲನ್ನು ದಾನ ಮಾಡುವುದು ಚಿಕಿತ್ಸಕ ಪ್ರಕ್ರಿಯೆಯಾಗಿದ್ದು, ಅದು ತಾಯಂದಿರು ದುಃಖವನ್ನು ಮರೆಯಲು ಮತ್ತು ಸಕ್ರಿಯವಾಗಿ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಹಾಯವಾಗುತ್ತದೆ.
ಹಾಗೆಯೇ ಎದೆಹಾಲನ್ನು ತಾಯಿ ನೀಡುವುದರಿಂದ ಶಿಶುವಿಗೆ ಆಗುವ ಲಾಭಗಳು:
*ಎದೆಹಾಲು ಶಿಶುಗಳಿಗೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವ ಮೂಲಕ ದೇಹದ ಸಮತೋಲನ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾಗುತ್ತದೆ.
*ಎದೆ ಹಾಲಿನ ಸೇವನೆಯು ಶಿಶುಗಳಿಗೆ ದೇಹದಲ್ಲಿ ವಿವಿಧ ಸೋಂಕು ಮತ್ತು ರೋಗಗಳಿಂದ ರಕ್ಷಿಸುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
*ಎದೆಹಾಲು ಕುಡಿಯುವ ಶಿಶುಗಳಲ್ಲಿ ಅಸ್ತಮಾ, ಅಲರ್ಜಿಗಳು, ಉಸಿರಾಟದ ಸೋಂಕುಗಳು, ಬಾಲ್ಯದ ರಕ್ತ ಕ್ಯಾನ್ಸರ್ ಮತ್ತು ಟೈಪ್- 2 ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳ ಅಪಾಯ ಕಡಿಮೆ ಇರುತ್ತದೆ.
*ಎದೆಹಾಲಿನಲ್ಲಿರುವ ಪೋಷಕಾಂಶಗಳು ಮತ್ತು ರೋಗ ನಿರೋಧಕ ಶಕ್ತಿಯು ಅವಧಿ ಪೂರ್ವ ಜನಿಸಿದ ಹಾಗೂ ಅನಾರೋಗ್ಯದಿಂದಿರುವ ಶಿಶುಗಳಿಗೆ ಹೆಚ್ಚು ಪ್ರಯೋಜನವಾಗುತ್ತದೆ, ಅಲ್ಲದೇ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗುತ್ತದೆ.
*ಸ್ತನ್ಯಪಾನವು (ದಾನವಾಗಿ ನೀಡಿದ ಎದೆಹಾಲು ಸ್ವೀಕರಿಸುವುದು ಸೇರಿದಂತೆ) ಮಕ್ಕಳಲ್ಲಿ ಹೆಚ್ಚಿನ ಬೌದ್ಧಿಕ ಬೆಳವಣಿಗೆಗೆ ಸಹಾಯವಾಗುತ್ತದೆ.
*ಎದೆಹಾಲನ್ನು ಜೀರ್ಣಿಸಿಕೊಳ್ಳುವುದು ಸುಲಭ. ಶಿಶುಗಳಲ್ಲಿ ಮಲಬದ್ಧತೆ, ಅತಿಸಾರ ಮತ್ತು ಇತರ ಜಠರ, ಕರುಳಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
*ಅವಧಿ ಪೂರ್ವ ಜನಿಸಿದ ಶಿಶುಗಳಲ್ಲಿ ಪ್ರಾಥಮಿಕವಾಗಿ ಕಾಣಿಸಿಕೊಳ್ಳುವ ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್ ಅಪಾಯವನ್ನು ಎದೆಹಾಲು ನೀಡುವುದರಿಂದ ಕಡಿಮೆ ಮಾಡಬಹುದು.
*ದಾನಿಯ ಎದೆಹಾಲು ಪಡೆದ ಎಚ್‌ಐವಿ ಹೊಂದಿರುವ ಶಿಶುಗಳು ನ್ಯುಮೋನಿಯಾ ಮತ್ತು ಇತರ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆ. ಎಚ್‌ಐವಿ-ಪಾಸಿಟಿವ್ ಇರುವ ತಾಯಂದಿರು ಮಗುವಿಗೆ ವೈರಸ್ ಹರಡುವುದನ್ನು ತಡೆಯಲು ಸ್ತನ್ಯಪಾನ ಮಾಡದಂತೆ ಸಲಹೆ ನೀಡುತ್ತಾರೆ, ಇಂತಹ ಸಂದರ್ಭಗಳಲ್ಲಿ ದಾನ ಮಾಡಿದ ಎದೆ ಹಾಲು ಶಿಶುವಿಗೆ ಸಂಜೀವಿನಿಯಿದ್ದಂತೆ. ಇಂತಹ ಶ್ರೇಷ್ಠವಾದ ಹಾಲುಣಿಸುವ ಪ್ರಕ್ರಿಯೆಯು ದೇವರು ಮೆಚ್ಚುವ ಕೆಲಸ.
ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗುವ ಪರಿಪೂರ್ಣ ಆಹಾರವೇ ಎದೆ ಹಾಲು. ಸಹಜವಾಗಿ ದೇವರು ಎಲ್ಲ ತಾಯಂದಿರಗೂ ಅಗತ್ಯ ಪ್ರಮಾಣದಲ್ಲಿ ಎದೆಹಾಲನ್ನು ನೀಡುವ ಶಕ್ತಿಯನ್ನು ಕೊಟ್ಟಿರುತ್ತಾನೆ. ಆದರೂ ನಾನಾ ಕಾರಣಗಳಿಂದಾಗಿ ಕೆಲವು ತಾಯಂದಿರಿಗೆ ಅಗತ್ಯ ಪ್ರಮಾಣದ ಹಾಲು ಉತ್ಪತ್ತಿ ಆಗುತ್ತಿಲ್ಲ. ಇಂತಹ ತಾಯಂದಿರ ನವಜಾತ ಶಿಶುಗಳು ಎದೆಹಾಲಿನಿಂದ ವಂಚಿತವಾಗುವ ಪರಿಸ್ಥಿತಿಯನ್ನು ಹೋಗಲಾಡಿಸಲು ಇರುವುದೊಂದೇ ಮಾರ್ಗ ಎಂದರೆ ತಾಯಂದಿರ ಎದೆಹಾಲಿನ ಬ್ಯಾಂಕ್.
ಬಹಳ ಜನ ತಾಯಂದಿರಿಗೆ ತಮ್ಮ ಮಕ್ಕಳಿಗೆ ಎದೆಹಾಲು ಉಣಿಸಿ, ಇನ್ನೂ ಹೆಚ್ಚು ಎದೆಹಾಲು ಉತ್ಪತ್ತಿ ಆಗುತ್ತಿರುತ್ತದೆ, ಇಂತಹ ತಾಯಂದಿರುಗಳು ತಾಯ್ತನ ಹಾಗೂ ಮಾನವೀಯ ಸೃಷ್ಟಿಯಿಂದ ಹೆಚ್ಚುವರಿ ಎದೆಹಾಲನ್ನು ದಾನ ಮಾಡಿ ಮಿಲ್ಕ್ ಬ್ಯಾಂಕ್‌ಗೆ ಕೊಡಬಹುದು. ತಾಯಂದಿರುಗಳು ಆಸ್ಪತ್ರೆಗೆ ಬಂದಾಗ ಹಾಲನ್ನು ತೆಗೆದುಕೊಡಬಹುದು ಅಥವಾ ಬರಲಾಗದ ದೂರದೂರಿನ ತಾಯಂದಿರು ಮಿಲ್ಕ್ ಬ್ಯಾಂಕ್‌ನವರು ಕೊಟ್ಟಂತಹ ಬಾಟಲ್‌ಗಳನ್ನು ಪಡೆದು ಕೊಡಬಹುದು, ಅದನ್ನು ಸಿಬ್ಬಂದಿಗಳು ಸೂಕ್ತ ವೈಜ್ಞಾನಿಕ ರೀತಿಯಲ್ಲಿ ಫ್ರಿಡ್ಜ್ ನಲ್ಲಿ ಶೇಖರಣೆ ಮಾಡಿಡುತ್ತಾರೆ. ಹೀಗೆ ಸಂಗ್ರಹಿಸಿದ ಎದೆ ಹಾಲನ್ನು ವೈಜಾನಿಕವಾಗಿ ಪ್ಯಾಶ್ಚರೀಕರಿಸಿ, ಆನಂತರ ಯಾವುದೇ ರೋಗಾಣಗಳಿಂದ ಮುಕ್ತವಾಗಿದೆ, ಇಲ್ಲವೇ ಎನ್ನುವುದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ. ಬಳಸಲು ಯೋಗ್ಯವಾಗಿದೆ ಎಂಬುದನ್ನು ಖಾತರಿಪಡಿಸಿಕೊಂಡು ಅಗತ್ಯ ಶಿಶುಗಳಿಗೆ ತಲುಪಿಸಲಾಗುತ್ತದೆ.
ಪ್ಯಾಶ್ಚರೀಕರಿಸಿದ ಹಾಲನ್ನು -20 ಡಿಗ್ರಿ ತಾಪಮಾನದಲ್ಲಿ ಶೇಖರಣೆ ಮಾಡಿಡಲಾಗುತ್ತದೆ. 6 ತಿಂಗಳ ಕಾಲ ಯಾವಾಗ ಬೇಕಾದರೂ ಬಳಸಬಹುದು ಮತ್ತು ಮರು ಬಳಕೆ ಮಾಡುವಾಗ ಸೂಕ್ತ ವೈಜ್ಞಾನಿಕ ರೀತಿಯಲ್ಲಿ ಕೊಠಡಿ ಉಷ್ಣಾಂಶಕ್ಕೆ ತರಲಾಗುತ್ತದೆ. ತಾಯಂದಿರು ಮಾನವೀಯ ಕಾಳಜಿ ಮೂಲಕ ಎದೆಹಾಲು ದಾನ ಮಾಡಲು ಮುಂದೆ ಬರಬೇಕು, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಎದೆಹಾಲನ್ನು ಸಂಗ್ರಹಿಸಲು ಮತ್ತು ಪೂರೈಕೆ ಮಾಡಲು ಸಾಧ್ಯವಾಗುತ್ತದೆ.
ಈ ಮಹತ್ವಾಕಾಂಕ್ಷೆಯ ತಾಯಂದಿರ ಎದೆಹಾಲಿನ ಮಿಲ್ಕ್ ಬ್ಯಾಂಕ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ 2022-23 ಸಾಲಿನ ಅಧ್ಯಕ್ಷರಾದಂತಹ ರೋ. ಚಂದ್ರು ಜೆ. ಪಿ. ಅವರ ಪ್ರೇರಣೆ ಹಾಗೂ ಡಾ. ಪಿ.ನಾರಾಯಣ್, ಡಾ. ಧನಂಜಯ ಸರ್ಜಿ, ರೋ.ನಟೇಶ್ ಇವರುಗಳ ಸಹಕಾರದೊಂದಿಗೆ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಆದ ಹ್ಯೂಮನ್ ಮಿಲ್ಕ್ ಬ್ಯಾಂಕ್ ಶಿವಮೊಗ್ಗದಲ್ಲಿ ಅನಾವರಣಗೊಳ್ಳುತ್ತಿದೆ.