
ಕೊರೊನಾ ಸೋಂಕು ತಡೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ
ಬೆಂಗಳೂರು, ಡಿ. 19: ನೆರೆ ರಾಜ್ಯಗಳಾದ ಕೇರಳ (kerala), ತಮಿಳುನಾಡಿನಲ್ಲಿ (tamilnadu) ಕೊರೊನಾ (corona) ಹೊಸ ರೂಪಾಂತರಿ ತಳಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕ್ರಿಸ್ಮಸ್, ಹೊಸ ವರ್ಷಾಚರಣೆ (new year) ಮತ್ತು ಚಳಿಗಾಲ ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ.
ಮಾರ್ಗಸೂಚಿಯ ವಿವರ: 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು, ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು (ವಿಶೇಷವಾಗಿ ಕಿಡ್ನಿ, ಹೃದಯ, ಲಿವರ್ ಸಮಸ್ಯೆಗಳು), ಎದೆ ಹಾಲುಣಿಸುವ ತಾಯಂದಿರು ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು. ಅಗತ್ಯ ಗಾಳಿ – ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ತೆರಳದಂತೆ ಸೂಚಿಸಲಾಗಿದೆ.
ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಉಸಿರಾಟದ ಕೊರೊನಾ (corona virus) ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆ ಪಡೆಯಬೇಕು. ಮೂಗು, ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಲಾಗಿದೆ.
ವೈಯಕ್ತಿಕ ಸ್ವಚ್ಛತೆ ಕಾಯ್ದುಕೊಳ್ಳುವುದು, ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳಬೇಕು. ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಮನೆಯಲ್ಲಿರುವಂತೆ, ವಿಶೇಷವಾಗಿ ಹಿರಿಯ ನಾಗರೀಕರು / ದುರ್ಬಲರನ್ನು ಅವಶ್ಯವಿದ್ದಲ್ಲಿ, ಮಾತ್ರವೇ ಭೇಟಿ ಮಾಡಬೇಕು.
ಆರೋಗ್ಯ ಸಮಸ್ಯೆಗಳನ್ನು ಹೊಂದಿದವರು, ಜನಸಂದಣಿಯ ಪುದೇಶಗಳಿಗೆ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಮಾಸ್ಕ್ (mask) ಧರಿಸಬೇಕು. ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆಯಿಂದಿದ್ದು, ವಿಮಾನ ನಿಲ್ದಾಣ ಹಾಗೂ ವಿಮಾನದೊಳಗೆ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಲಾಗಿದೆ.
ತಪಾಸಣೆ ಹೆಚ್ಚಳಕ್ಕೆ ಸೂಚನೆ: ಕೇರಳು ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಳಕ್ಕೆ ಸೂಚನೆ ನೀಡಲಾಗಿದೆ. ಆದರೆ ನಿರ್ಬಂಧ ಹೇರುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಂತಾರಾಷ್ಟ್ರೀಯ ವಿಮಾನಯಾನ ಪ್ರಯಾಣ ಮಾಡಿದ ಕೋವಿಡ್ (covid) ಸೋಂಕಿನ ಲಕ್ಷಣ ಹೊಂದಿದವರನ್ನು ತಪಾಸಣೆ ನಡೆಸಿ, ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.
ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಕಾರ್ಯಾಚರಣೆ ಸಿದ್ದತೆಗಳ ಬಗ್ಗೆ ಖಚಿತ ಪಡಿಸಿಕೊಳ್ಳಲು ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.