
ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಸರಗಳ್ಳರ ಕೈಚಳಕ : ಎರಡು ಕಡೆ ಮಹಿಳೆಯರ ಚಿನ್ನದ ಸರ ಅಪಹರಣ!
ಶಿವಮೊಗ್ಗ, ಡಿ. 20: ಶಿವಮೊಗ್ಗ ನಗರದಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ ಸರಗಳ್ಳರ ತಂಡವೊಂದು, ಎರಡು ಕಡೆ ಮಹಿಳೆಯರ ಚಿನ್ನದ ಸರ ಅಪಹರಣ ಮಾಡಿದೆ.
ದೊಡ್ಡಪೇಟೆ ಹಾಗೂ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಘಟನೆ ನಡೆದಿದೆ. ಪಲ್ಸರ್ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಮುಂಜಾನೆ ದೇವಾಲಯಕ್ಕೆ ಹೋಗುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಲಾಗಿದೆ.
ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆಯಲ್ಲಿ, ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬರುತ್ತಿದ್ದ ಯುವತಿಯೋರ್ವಳ ಚಿನ್ನದ ಸರ ಅಪಹರಿಸಲಾಗಿದೆ. ಸರವು 8 ರಿಂದ 10 ಗ್ರಾಂ ತೂಕದ್ದಾಗಿದೆ ಎಂದು ತಿಳಿದುಬಂದಿದೆ.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ, ಶರಾವತಿನಗರದ ಆದಿಚುಂಚನಗಿರಿ ಶಾಲೆ ಸಮೀಪದ ಕಾಲಭೈರವೇಶ್ವರ ದೇವಾಲಯಕ್ಕೆ ಹೋಗಿ ಮನೆಗೆ ಬರುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಿಸಲಾಗಿದೆ. ಸರವು ಸುಮಾರು 50 ಗ್ರಾಂ ತೂಕದ್ದಾಗಿದೆ ಎಂದು ಹೇಳಲಾಗಿದೆ.
ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾದವರ ಪತ್ತೆಗೆ ಪೊಲೀಸರು ಶೋಧ ನಡೆಸಲಾರಂಭಿಸಿದ್ದಾರೆ. ವಿವಿಧೆಡೆಯ ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.