Shimoga DC instructs to take strict action to curb illegal sand mining and transportation ಅಕ್ರಮ ಮರಳು ಗಣಿಗಾರಿಕೆ – ಸಾಗಾಣಿಕೆ ಕಡಿವಾಣಕ್ಕೆ ಕಠಿಣ ಕ್ರಮಕೈಗೊಳ್ಳಲು ಶಿವಮೊಗ್ಗ ಡಿಸಿ ಸೂಚನೆ

ಅಕ್ರಮ ಮರಳು ಗಣಿಗಾರಿಕೆ – ಸಾಗಾಣಿಕೆ  ಕಡಿವಾಣಕ್ಕೆ ಕಠಿಣ ಕ್ರಮಕೈಗೊಳ್ಳಲು ಶಿವಮೊಗ್ಗ ಡಿಸಿ ಸೂಚನೆ

ಶಿವಮೊಗ್ಗ, ಡಿ. 20: ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ಮರಳು ಮತ್ತು ಮಣ್ಣು ಸಾಗಾಣಿಕೆ – ಗಣಿಗಾರಿಕೆಗೆ ಕಡಿವಾಣ ಹಾಕಲು, ದಂಡ ವಿಧಿಸುವುದರೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಡಿ.19 ರಂದು ಏರ್ಪಡಿಸಲಾಗಿದ್ದ ಜಿಲ್ಲಾ ಟಾಸ್ಕ್‍ಫೋರ್ಸ್ ಮತ್ತು ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಆಗುಂಬೆ ಬಳಿ, ಹೊಳಲೂರು, ಕೂಡ್ಲಿ, ಪುರಲೆ, ವೈಸನಹಳ್ಳಿ ಇನ್ನೂ ಹಲವೆಡೆ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆಂಬ ದೂರುಗಳು ಬಂದಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ತಹಶೀಲ್ದಾರರು, ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. 

ಅಕ್ರಮ ಮರಳು, ಮಣ್ಣು ಜಂಬಿಟ್ಟಿಗೆ ಗಣಿಗಾರಿಕೆ ಮತ್ತು ಸಾಗಾಣಿಕೆ ಕಂಡು ಬರುವ ಪ್ರದೇಶಗಳಲ್ಲಿ ರಾತ್ರಿಯಿಂದ ಬೆಳಿಗ್ಗೆ ವರೆಗೆ ವಾಹನಗಳಲ್ಲಿ ರೌಂಡ್ಸ್ ಮಾಡಲು ತಂಡವನ್ನು ರಚಿಸಿ, ಕ್ರಮ ಕೈಗೊಂಡು ಪ್ರಕರಣಗಳನ್ನು ವರದಿ ಮಾಡಬೇಕು. ಮತ್ತು ತಾಲ್ಲೂಕುಗಳಲ್ಲಿ ದಂಡ ಪ್ರಕ್ರಿಯೆ ಹೆಚ್ಚಬೇಕು ಎಂದರು.

ಉಪ ಖನಿಜಗಳ ಅಕ್ರಮ ಗಣಿಗಾರಿಕೆ/ಸಾಗಾಣಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಿಯಮದನ್ವಯ ಖನಿಜ ಸಾಗಾಣಿಕೆ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಉಪಕರಣವನ್ನು ಅಳವಡಿಸಬೇಕು. ಇಲ್ಲವಾದಲ್ಲಿ ಅಗತ್ಯ ಕ್ರಮಗಳನ್ನು ಜರುಗಿಸುವಂತೆ ಸೂಚನೆ ಅಧಿಕಾರಿಗಳಿಗೆ ನೀಡಿದರು.

ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಲು ತಾಲ್ಲೂಕು ಮರಳು ಉಸ್ತುವಾರಿ ಸಮಿತಿಯು ನಿಯಮಾನುಸಾರ ಕ್ರಮ ವಹಿಸಿ, ವಹಿಸಿದ ಕ್ರಮಗಳ ಕುರಿತು ವರದಿ ನೀಡಬೇಕು. ಹಾಗೂ ಕಳೆದ ಸಾಲಿನಲ್ಲಿ ಸರ್ಕಾರದ ಮರಳು ಕ್ವಾರೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಶಿವಮೊಗ್ಗ ಎಸಿ ಯವರಿಂದ ವರದಿ ಪಡೆದು ಕ್ರಮ ವಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಸೀನಿಯರ್ ಜಿಯಾಲಜಿಸ್ಟ್ ನವೀನ್ ಮಾತನಾಡಿ, 2023-24 ನೇ ಸಾಲಿನ ನವೆಂಬರ್ ಅಂತ್ಯದವರೆಗೆ ರೂ.23.32 ಕೋಟಿ ರಾಜಸ್ವ ಸಂಗ್ರಹಿಸುವ ಮೂಲಕ ಶೇ.105 ಗುರಿ ಸಾಧಿಸಲಾಗಿದೆ. ಅಕ್ರಮ ಉಪಖನಿಜ ಗಣಿಗಾರಿಕೆ/ಸಾಗಾಣಿಕೆ/ದಾಸ್ತಾನು ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಒಟ್ಟು ರೂ. 51.78 ಲಕ್ಷ ಹಾಗೂ ಪೊಲೀಸ್ ಇಲಾಖೆಯಿಂದ ರೂ.19.11 ಲಕ್ಷ ದಂಡ ಸಂಗ್ರಹಿಸಲಾಗಿದೆ 

ತುಂಗಾ ಮೇಲ್ದಂಡೆ ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಇವರು ಅಕ್ರಮ ಮಣ್ಣು ಗಣಿಗಾರಿಕೆ ಸಲುವಾಗಿ ರೂ. 70,680 ದಂಡ ವಿಧಿಸಿರುತ್ತಾರೆ. ಸೊರಬ ತಹಶೀಲ್ದಾರ್ ಅಕ್ರಮ ಜಂಬಿಟ್ಟಿಗೆ ಸಾಗಾಣಿಕೆಗೆ ರೂ.17800/- ದಂಡ ವಿಧಿಸಿದ್ದು ಒಟ್ಟು ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆಯಿಂದ ರೂ,71.79 ಲಕ್ಷ ದಂಡ ವಸೂಲಿ ಮಾಡಲಾಗಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಗಣಿ ಗುತ್ತಿಗೆ ಅರ್ಜಿ, ಕಟ್ಟಡ ಕಲ್ಲು ಗಣಿಗಾರಿಕೆ ಮಂಜೂರಾತಿ, ಕಲ್ಲುಪುಡಿ ಮಾಡುವ ಘಟಕ ಸ್ಥಾಪನೆಗೆ ಅನುಮತಿ ಇತರೆ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಅಪರ ಪೊಲೀಸ್ ವರಿಷ್ಟಾಧಿಕಾರಿ ಅನಿಲ್‍ಕುಮಾರ್ ಭೂಮರೆಡ್ಡಿ, ತಹಶೀಲ್ದಾರರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Arrest of four thieves: Seizure of valuable gold silver cash ಶಿವಮೊಗ್ಗ : ನಾಲ್ವರ ಬಂಧನ - ಲಕ್ಷಾಂತರ ರೂ. ಮೌಲ್ಯದ ಚಿನ್ನ ಬೆಳ್ಳಿ ನಗದು ವಶ Previous post ಶಿವಮೊಗ್ಗ : ನಾಲ್ವರ ಬಂಧನ – ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ವಶ
ಪೌಷ್ಟಿಕಾಂಶಗಳ ಸಂಪತ್ತು ‘ಸಿರಿ ಧಾನ್ಯ’- ಗಾತ್ರ ಚಿಕ್ಕದಾದರೂ ಪಾತ್ರ ದೊಡ್ಡದು Next post ಪೌಷ್ಟಿಕಾಂಶಗಳ ಸಂಪತ್ತು ‘ಸಿರಿ ಧಾನ್ಯ’- ಗಾತ್ರ ಚಿಕ್ಕದಾದರೂ ಪಾತ್ರ ದೊಡ್ಡದು…