
ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಮೆಸ್ಕಾಂ ಎಇಇ!
ಸೊರಬ, ಡಿ. 21: ಕಚೇರಿಯಲ್ಲಿಯೇ ಗುತ್ತಿಗೆದಾರನೋರ್ವನಿಂದ 20 ಸಾವಿರ ರೂ. ಲಂಚ (bribe) ಪಡೆಯುವ ವೇಳೆ, ಮೆಸ್ಕಾಂ (mescom) ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಓರ್ವರು ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ಗುರುವಾರ (Dec -21) ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದಿದೆ.
ಜಿ. ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದ ಎಇಇ (aee) ಎಂದು ಗುರುತಿಸಲಾಗಿದೆ. ಇವರ ವಿರುದ್ದ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಲಂಚಕ್ಕೆ ಡಿಮ್ಯಾಂಡ್ : ಸೊರಬ (soraba) ತಾಲೂಕಿನ ಗುತ್ತಿಗೆದಾರ ಪ್ರದೀಪ್ ಎಂಬುವರು ಎಲೆಕ್ಟ್ರಿಕಲ್ ಕ್ಲಾಸ್ – 1 ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃಷಿ ಪಂಪ್ ಸೆಟ್ ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯ ಲೈನ್ ವರ್ಕ್ ಮಾಡಿದ್ದರು.
ಟ್ರಾನ್ಸ್’ಫಾರ್ಮಾರ್ (ಟಿಸಿ) ಅಳವಡಿಸುವ ಕಾರ್ಯ ಬಾಕಿಯಿತ್ತು. ಟಿಸಿಗಳನ್ನು ನೀಡಲು ಎಇಇ ಜಿ. ರಮೇಶ್ ಅವರು 20 ಸಾವಿರ ರೂ. ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು.
ಲಂಚ ನೀಡಲು ಇಷ್ಟವಿರದ ಪ್ರದೀಪ್ ಅವರು, ಶಿವಮೊಗ್ಗ (shimoga) ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ (sp) ಎನ್.ವಾಸುದೇವರಾಮ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಉಮೇಶ್ ಈಶ್ವರನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.