
ಮಾರುವೇಷದ ಕಾರ್ಯಾಚರಣೆ : ಕಾನೂನುಬಾಹಿರ ಚಟುವಟಿಕೆಗಳು ಪತ್ತೆಯಾದರೆ ಶಿಸ್ತುಕ್ರಮ – ಪೊಲೀಸರಿಗೆ ಶಿವಮೊಗ್ಗ ಎಸ್ಪಿ ಎಚ್ಚರಿಕೆ!
ಶಿವಮೊಗ್ಗ, ಡಿ. 23: ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಏರಿಕೆಯಾಗುತ್ತಿವೆ. ಮತ್ತೊಂದೆಡೆ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಪೊಲೀಸ್ ಠಾಣೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ‘ತಮ್ಮ ವ್ಯಾಪ್ತಿಯಲ್ಲಿ ಕ್ರೈಂ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ. ಇಲ್ಲವೇ ಶಿಸ್ತು ಕ್ರಮ ಎದುರಿಸಿ’ ಎಂಬ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ!
‘ಓಸಿ, ಮಟ್ಕಾ, ಇಸ್ಪೀಟ್ ಜೂಜಾಟ ತಡೆಗಟ್ಟಬೇಕು. ಬೇಜವಾಬ್ದಾರಿತನ, ನಿರ್ಲಕ್ಷ್ಯತನದಿಂದ ಕ್ರೈಂಗಳು ಮುಂದುವರಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಮ್ಮ ಕಚೇರಿಯಿಂದ ಮಾರುವೇಷ (ಡೆಕಾಯ್) ದ ತಂಡಗಳನ್ನು ಕಳುಹಿಸಿ ಅಪರಾಧ ಚಟುವಟಿಕೆಗಳ ಪರಿಶೀಲಿಸಲಾಗುವುದು. ಈ ವೇಳೆ ಅಕ್ರಮಗಳು ಪತ್ತೆಯಾದರೆ ಆಯಾ ಠಾಣೆಗಳ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ವಿರುದ್ದ ಶಿಸ್ತಿನ ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ಡಿ. 22 ರಂದು ಶಿವಮೊಗ್ಗ ನಗರದ ಎಲ್ಲ ಪೊಲೀಸ್ ಠಾಣೆಗಳ ಇನ್ಸ್’ಪೆಕ್ಟರ್, ಸಬ್ ಇನ್ಸ್’ಪೆಕ್ಟರ್ ಹಾಗೂ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಸಭೆಯಲ್ಲಿ ಜಿ.ಕೆ.ಮಿಥುನ್ ಕುಮಾರ್ ಈ ಎಚ್ಚರಿಕೆ ನೀಡಿದ್ದಾರೆ.
ಮಾಹಿತಿ ಸಂಗ್ರಹಿಸಿ: ‘ಜೂಜಾಟದ ಕುರಿತಂತೆ ಠಾಣಾಧಿಕಾರಿಗಳು ಮತ್ತು ಗುಪ್ತ ಮಾಹಿತಿ ಕರ್ತವ್ಯದ ಸಿಬ್ಬಂದಿಗಳು, ಸಮಗ್ರ ಮಾಹಿತಿ ಕಲೆಹಾಕಬೇಕು. ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು. ಓಸಿ ದಂಧೆಕೋರರು, ಕಿಂಗ್ ಪಿನ್ ಗಳನ್ನು ಪತ್ತೆ ಹಚ್ಚಬೇಕು. ಕಠಿಣ ಕೇಸ್ ದಾಖಲಿಸಬೇಕು. ಮತ್ತೇ ದಂಧೆಯಲ್ಲಿ ತೊಡಗದಂತೆ ಎಚ್ಚರಬಹಿಸಬೇಕು’ ಎಂದು ಎಸ್ಪಿ ಸಲಹೆ ನೀಡಿದ್ದಾರೆ.
ಕ್ರೈಂಗಳ ಕುರಿತಂತೆ ಸಾರ್ವಜನಿಕರು ಹಾಗೂ ಮಾಧ್ಯಮಗಳಲ್ಲಿ ಬರುವ ಮಾಹಿತಿಗಳಿಗೆ ತಕ್ಷಣವೇ ಸ್ಪಂದಿಸಬೇಕು. ನಿರ್ಧಾಕ್ಷಿಣ್ಯ ಕ್ರಮಗಳ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ಎಂ ಮೊದಲಾದವರಿದ್ದರು.
10 ದಿನಗಳ ಡೆಡ್ ಲೈನ್…!
*** ಮುಂದಿನ 10 ದಿನಗಳಲ್ಲಿ ಗಾಂಜಾ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಬೇಕು. ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಗಾಂಜಾ ಸೇವನೆ ಪ್ರಕರಣದಲ್ಲಿ ಗಾಂಜಾ ಮಾರಾಟ ಹಾಗೂ ಬೆಳೆದ ಆರೋಪಿತರ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದಾರೆ.
ಕಾನೂನು – ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಂಜೆಯ ವೇಳೆ ಏರಿಯಾ ಡಾಮಿನೇಷನ್ ವಿಶೇಷ ಗಸ್ತು ನಡೆಸಬೇಕು. ಅನುಮಾನಾಸ್ಪದ ಮತ್ತು ಸಾರ್ವಜನಿಕ ಉಪಟಳ ನೀಡುವ ವ್ಯಕ್ತಿಗಳ ವಿರುದ್ದ ಮುಂಜಾಗ್ರತಾ ಪ್ರಕರಣ ಹಾಕಬೇಕು ಎಂದು ಸಲಹೆ ನೀಡಿದ್ದಾರೆ.