
ರೈತರಿಂದ ಖರೀದಿಸುವ ಹಾಲಿನ ದರದಲ್ಲಿ 2 ರೂ. ಇಳಿಕೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಡಿ. 24: ರೈತರಿಂದ ಖರೀದಿಸುವ ಹಾಲಿನ (milk) ದರದಲ್ಲಿ ದಿಢೀರ್ ಆಗಿ 2 ರೂ. ಇಳಿಕೆ ಮಾಡಿ, ಶಿಮುಲ್ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ) ಆದೇಶ ಹೊರಡಿಸಿದೆ! ಡಿ. 21 ರಿಂದಲೇ ಈ ಆದೇಶ ಜಾರಿಯಾಗಿದೆ. ಬರಗಾಲದ ವೇಳೆ ಖರೀದಿ ದರ ಇಳಿಕೆ ನಿರ್ಧಾರವು, ಸಾವಿರಾರು ಹಾಲು ಉತ್ಪಾದಕರಿಗೆ ಹೊರೆಯಾಗಿ ಪರಿಣಮಿಸುವಂತಾಗಿದೆ.
ದರ ಕಡಿತಕ್ಕೂ ಮುನ್ನ ಶಿಮುಲ್ (shimul) ಹಾಲು ಉತ್ಪಾದಕರ ಅಹವಾಲು ಆಲಿಸುವ ಕಾರ್ಯ ನಡೆಸಿಲ್ಲ. ಡಿ. 21 ರಂದು ಬೆಳಿಗ್ಗೆ ಹಾಲು ಖರೀದಿ ಕೇಂದ್ರದಲ್ಲಿ ದರ ಕಡಿತದ ಮಾಹಿತಿ ಪ್ರಕಟಣೆಯ ನಂತರವಷ್ಟೆ ವಿಷಯ ಗೊತ್ತಾಗಿದೆ ಎಂದು ಕೆಲ ರೈತರು ದೂರಿದ್ದಾರೆ.
ಪ್ರಸ್ತುತ ವರ್ಷ ತೀವ್ರ ಸ್ವರೂಪದ ಬರಗಾಲ ಎದುರಾಗಿದೆ. ಇದರಿಂದ ಹೈನುಗಾರಿಕೆಯ ಮೇಲೆ ಹೆಚ್ಚಿನ ರೈತರು ಅವಲಂಬಿತರಾಗಿದ್ದಾರೆ. ಮತ್ತೊಂದೆಡೆ ಜಾನುವಾರುಗಳ ಮೇವು, ಪಶು ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ಒಕ್ಕೂಟವು ಹಾಲು ಉತ್ಪಾದಕರಿಗೆ ಅನುಕೂಲಕರವಾದ ನಿರ್ಧಾರ ಕೈಗೊಳ್ಳಬೇಕಾಗಿತ್ತು.
ಆದರೆ ದಿಢೀರ್ ಆಗಿ ಖರೀದಿಸುವ ಹಾಲಿನ ಬೆಲೆಯಲ್ಲಿ 2 ರೂ. ಇಳಿಕೆ ಮಾಡಲಾಗಿದೆ. ಇದು ಖಂಡನಾರ್ಹವಾದುದು. ತಕ್ಷಣವೇ ದರ ಕಡಿತದ ಆದೇಶ ಹಿಂಪಡೆಯಬೇಕು ಎಂಬ ಆಗ್ರಹ ಕೆಲ ಹಾಲು ಉತ್ಪಾದಕರದ್ದಾಗಿದೆ.
ಒಕ್ಕೂಟಕ್ಕೆ ಕೋಟ್ಯಾಂತರ ರೂ. ನಷ್ಟ!
*** ‘ಒಕ್ಕೂಟಕ್ಕೆ ಪ್ರತಿನಿತ್ಯ ಸರಾಸರಿ 7 ಲಕ್ಷ ಲೀಟರ್ ನಷ್ಟು ಹಾಲು ಸರಬರಾಜಾಗುತ್ತಿದೆ. ಇದರಲ್ಲಿ ಮಾರಾಟವಾಗುತ್ತಿರುವುದು ಸರಿಸುಮಾರು 3.20 ಲಕ್ಷ ಲೀಟರ್ ಮಾತ್ರವಾಗಿದೆ. ಉಳಿದ ಹಾಲನ್ನು ಇತರೆ ಉಪ ಉತ್ಪನ್ನಗಳ ತಯಾರಿಗೆ ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ಹಾಲಿನ ಬೆಲೆ ಏರಿಕೆಯಾದಾಗ, ಹೆಚ್ಚಿನ ದರವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲಾಗುತ್ತಿದೆ. ಹಾಗೆಯೇ ಕ್ಷೀರ ಭಾಗ್ಯ ಯೋಜನೆಯಡಿ ಶಾಲೆಗಳಿಗೆ ಸರಬರಾಜು ಮಾಡುತ್ತಿರುವ ಹಾಲಿನ ಪುಡಿಗೆ ಸರ್ಕಾರ ನೀಡುತ್ತಿರುವ ದರವು ಕೂಡ ಕಡಿಮೆಯಿದೆ. ಈ ಎಲ್ಲ ಕಾರಣಗಳಿಂದ ಪ್ರತಿ ತಿಂಗಳು ಕೋಟ್ಯಾಂತರ ರೂ. ನಷ್ಟವಾಗುತ್ತಿದೆ. ಇದರಿಂದ ಆರ್ಥಿಕ ಸ್ಥಿತಿ ಸರಿದೂಗಿಸಲು ರೈತರಿಂದ ಖರೀದಿಸುವ ಹಾಲಿನ ದರ ಕಡಿತ ಮಾಡುವುದು ಅನಿವಾರ್ಯವಾಗಿದೆ’ ಎಂದು ಒಕ್ಕೂಟದ ಮೂಲಗಳು ಹೇಳುತ್ತವೆ.
ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಲಿ
*** ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ರಾಜ್ಯದ ಕೆಲ ಹಾಲು ಒಕ್ಕೂಟಗಳು ದಿಢೀರ್ ಆಗಿ ಬೆಲೆ ಇಳಿಕೆ ಮಾಡಲಾರಂಭಿಸಿವೆ. ಬರಗಾಲದ ಸಂದರ್ಭದಲ್ಲಿ ಹಾಲಿನ ಖರೀದಿ ದರ ಇಳಿಕೆ ಮಾಡುತ್ತಿರುವುದರಿಂದ, ಸಣ್ಣ – ಮಧ್ಯಮ ವರ್ಗದ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರ (state government) ಮಧ್ಯಪ್ರವೇಶಿಸಿ ಒಕ್ಕೂಟಗಳಿಗೆ ಆಗುತ್ತಿರುವ ನಷ್ಟ ಸರಿದೂಗಿಸುವ ಕಾರ್ಯ ನಡೆಸುವುದರ ಜೊತೆಗೆ, ಬರಗಾಲದ ವೇಳೆ ಹಾಲಿನ ದರ ಇಳಿಕೆ ಮಾಡದಂತೆ ಸೂಚನೆ ನೀಡಬೇಕಾಗಿದೆ ಎಂಬ ಆಗ್ರಹಗಳು ಕೇಳಿಬರಲಾರಂಭಿಸಿವೆ.